Site icon Vistara News

ದೇಗುಲ ಸಿಬ್ಬಂದಿಯ ಎಡವಟ್ಟು; ಭಕ್ತನಿಗೆ ಪ್ರಸಾದದ ಬದಲು ದುಡ್ಡಿನ ಚೀಲ !

Male Mahadeshwara Betta

ಚಾಮರಾಜನಗರ: ಇಲ್ಲಿನ ಹುನೂರಿನಲ್ಲಿರುವ ಮಲೆಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪ್ರಸಾದದ ಲಾಡು ಕೊಡಲು ಕುಳಿತಿದ್ದ ಸಿಬ್ಬಂದಿ ಮಾಡಿದ ಎಡವಟ್ಟು ಈಗ ದೊಡ್ಡ ಸುದ್ದಿಯಾಗಿದೆ. ಅಷ್ಟಲ್ಲದೆ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ದೇಗುಲದ ಆಡಳಿತ ಮಂಡಳಿಗೂ ಆತಂಕ ಉಂಟಾಗಿದೆ. ಈ ದೇವಸ್ಥಾನದಲ್ಲಿ ಸಾಮಾನ್ಯವಾಗಿ ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಅದರಲ್ಲೂ ಈಗ ಶ್ರಾವಣ ಮಾಸವಾಗಿದ್ದರಿಂದ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಇಲ್ಲಿಗೆ ಜನರು ಆಗಮಿಸುತ್ತಿದ್ದಾರೆ. ಅಂತೆಯೇ ನಿನ್ನೆ ಕೂಡ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅದೇ ವೇಳೆ ಈ ಪ್ರಮಾದ ಉಂಟಾಗಿದೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ದರ್ಶನಕ್ಕೆ ಟಿಕೆಟ್‌ ಕೊಡಲೆಂದು ಕುಳಿತಿದ್ದ ಸಿಬ್ಬಂದಿ, ಲಾಡಿನ ಪ್ರಸಾದದ ಜತೆಗೆ ಹಣದ ಚೀಲವನ್ನೂ ಇಟ್ಟುಕೊಂಡು ಕುಳಿತಿದ್ದರು. ಲಾಡುಗಳ ಬ್ಯಾಗ್‌ ಸಮೀಪವೇ ಹಣದ ಚೀಲ ಇದ್ದ ಕಾರಣ, ಭಕ್ತನೊಬ್ಬನಿಗೆ ಲಾಡಿನ ಚೀಲದ ಬದಲು ಹಣದ ಚೀಲ ನೀಡಿದ್ದಾರೆ. ಇದು ಕಣ್ತಪ್ಪಿನಿಂದ ಆಗಿದ್ದು. ಆದರೆ ಈ ಚೀಲದಲ್ಲಿ ಇದ್ದಿದ್ದು ನೂರೋ, ಇನ್ನೂರೋ ರೂಪಾಯಿ ಅಲ್ಲ. ಅದರಲ್ಲಿ ಇದ್ದಿದ್ದು ೨ ಲಕ್ಷ ರೂಪಾಯಿ. ಭಕ್ತನಿಗೆ ಚೀಲ ಕೊಟ್ಟು, ಅವನು ತೆಗೆದುಕೊಂಡು ಹೋದ ಎಷ್ಟೋ ಹೊತ್ತಿನ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಲಾಡಿನ ಬದಲು ಹಣ ಹೋಯಿತು ಅಂದಾಕ್ಷಣ ಸಹಜವಾಗಿಯೇ ದೇಗುಲದಲ್ಲಿ ಗಲಿಬಿಲಿಯಾಗಿದೆ. ಪೊಲೀಸರಿಗೂ ದೂರು ಕೊಡಲಾಗಿದೆ. ಸದ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಪರಿಶೀಲನೆ ಮಾಡಲಾಗಿದೆ. ಲಾಡಿನ ಚೀಲದ ಬದಲು, ಹಣದ ಚೀಲ ಕೊಟ್ಟಿದ್ದು ಅದರಲ್ಲಿ ಕಾಣುತ್ತದೆ. ಆ ಭಕ್ತನಿಗಾಗಿ ಹುಡುಕಾಟ ಶುರುವಾಗಿದೆ.

ಇದನ್ನೂ ಓದಿ: ಪ್ರಧಾನಿ ಕಚೇರಿಯ ಅಧಿಕಾರಿ ಹೆಸರಿನಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ! ಮುಂದೆ ಆಗಿದ್ದೇನು?

Exit mobile version