Site icon Vistara News

ಕಾಂಗ್ರೆಸ್‌ನಿಂದ ಮಲೆನಾಡ ಜನಾಕ್ರೋಶ ಪಾದಯಾತ್ರೆ; ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಾಗಿದ ಬೃಹತ್‌ ಜಾಥಾ

ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ ಜಾತಾ ಮಲೆನಾಡು ಸಮಸ್ಯೆ

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡುವುದು ಸೇರಿದಂತೆ ಮಲೆನಾಡು ಜನತೆಯ ಜ್ವಲಂತ ಸಮಸ್ಯೆಯನ್ನು ಮುಂದಿಟ್ಟುಕೊಂಡು ಆಯನೂರಿನಿಂದ ಶಿವಮೊಗ್ಗದ ವರೆಗೆ ಕಾಂಗ್ರೆಸ್‌ನಿಂದ ಬೃಹತ್‌ ಜನಜಾಗೃತಿ ಯಾತ್ರೆ ಪ್ರಾರಂಭವಾಗಿದ್ದು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು. ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಮಂದಿ ಹೆಜ್ಜೆ ಹಾಕಿದ್ದಾರೆ.

ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ ಜಾತಾ ಮಲೆನಾಡು ಸಮಸ್ಯೆ

ಇಳಿ ವಯಸ್ಸಿನಲ್ಲಿಯೂ ಕಾಗೋಡು ತಿಮ್ಮಪ್ಪ ಹೋರಾಟದಲ್ಲಿ ಭಾಗಿಯಾಗಿದ್ದು, ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಶಿವಮೊಗ್ಗದ ಆಯನೂರಿನಿಂದ ಮೆರವಣಿಗೆ ಹೊರಟಿದ್ದು, ಶಿವಮೊಗ್ಗದ ಎನ್‌ವಿ ಮೈದಾನದಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಜಮಾವಣೆಗೊಳ್ಳಲಿದ್ದಾರೆ.

ಮಲೆನಾಡಿಗರ ಜ್ವಲಂತ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟವನ್ನು ಪ್ರಾರಂಭಿಸಿದ್ದೇವೆ. ರಾಜ್ಯ ಸರ್ಕಾರ ರೈತರಿಗೆ ಕೊಟ್ಟ ಭೂಮಿಯನ್ನು ನೋಟಿಫೈ ಮಾಡಿದೆ. ಆದರೆ, ಇನ್ನೂ ಕಾಲ ಮಿಂಚಿಲ್ಲ. ಸಂತ್ರಸ್ತರ ಭೂಮಿಯ ಪಟ್ಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಕಾಗೋಡು ತಿಮ್ಮಪ್ಪ ಆಗ್ರಹಿಸಿದರು.

ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ ಜಾತಾ ಮಲೆನಾಡು ಸಮಸ್ಯೆ

ಇದನ್ನೂ ಓದಿ | Border Dispute | ಬೆಳಗಾವಿಗೆ ಬನ್ನಿ ಎಂದು ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದ MES; ಉದ್ದಟತನ ಪ್ರದರ್ಶನ

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್ ಇತರರು ಭಾಗಿಯಾಗಿದ್ದಾರೆ. ಸುಮಾರು 18 ಕಿ.ಮೀ. ಕ್ರಮಿಸಲಿರುವ ಪಾದಯಾತ್ರೆ ಸಾಗಲಿದೆ.

ಜಿಲ್ಲೆಯ ವಿವಿಧ ತಾಲೂಕಿನಿಂದ ಕಾರ್ಯಕರ್ತರು ಆಗಮಿಸಿದ್ದು, ಕಸ್ತೂರಿ ರಂಗನ್ ವರದಿ ವಿರೋಧಿಸಿ, ಶರಾವತಿ ಮುಳುಗಡೆ ರೈತರಿಗೆ ಭೂಮಿಯ ಹಕ್ಕು ನೀಡುವಂತೆ ಆಗ್ರಹಿಸಿ, ಬಗರ್ ಹುಕುಂ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ, ರೈತರ ವಿರುದ್ಧ ಭೂ ಕಬಳಿಕೆ ಮೊಕದ್ದಮೆ ದಾಖಲಿಸುತ್ತಿರುವುದನ್ನು ಖಂಡಿಸಿ ಘೋಷಣೆ ಕೂಗಿದ್ದಾರೆ.

ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೆವಾಲ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗುವ ನಿರೀಕ್ಷೆ ಇದೆ.

ಇದು ವೋಟಿನ ಬೇಟೆ
ಕಾಂಗ್ರೆಸ್ ಪಾದಯಾತ್ರೆಯು ಮತ ಬೇಟೆಗಾಗಿ ಆಗಿದೆ. ಅದಕ್ಕಾಗಿ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ. ಇದರ ಹಿಂದೆ ಬೇರೇನೂ ಇಲ್ಲ. ಕಳೆದ 60 ವರ್ಷಗಳಿಂದ ಈ ಕಾಂಗ್ರೆಸ್ ಇತ್ತೋ, ಸತ್ತಿತ್ತೋ ಎಂದು ಜನ ಕೇಳಬೇಕಿದೆ. ಅಂದಿನಿಂದಲೂ ಈ ಸಮಸ್ಯೆ ಇದೆ. 2016-17ರಲ್ಲಿ ಚುನಾವಣೆ ಗಿಮಿಕ್ ಮಾಡಿ ಕೇಂದ್ರ ಸರ್ಕಾರಕ್ಕೆ ತಿಳಿಸದೆ ಡಿನೋಟಿಫಿಕೇಶನ್ ಮಾಡಿದ್ದರು. ತಾಂತ್ರಿಕವಾಗಿ ಮಾಡಿದ ತಪ್ಪು ಇದಾಗಿದ್ದರಿಂದ ಹೈಕೋರ್ಟ್ ಅದನ್ನು ರದ್ದು ಮಾಡಿದೆ. ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ನಾವೀಗ ಸಮಗ್ರ ಸರ್ವೇ ಮಾಡಿಸುತ್ತಿದ್ದೇವೆ. ಒಟ್ಟಾರೆ ದಾಖಲೆ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳಿಸುತ್ತೇವೆ. ಕೇಂದ್ರ ಸರ್ಕಾರದ ಗಮನಕ್ಕೆ ತಾರದೆ ಡಿನೋಟಿಫಿಕೇಶನ್ ಮಾಡಿರುವುದೇ ತಪ್ಪು. ಕೂಲಂಕಷವಾಗಿ ದಾಖಲೆ ಪರಿಶೀಲನೆ ಮಾಡಿರಬೇಕಾಗಿರುವುದರಿಂದ ಸಮಯ ಆಗುತ್ತಿದೆ. ದೋಷ ರಹಿತ ವರದಿ ಕಳುಹಿಸಿದರೆ ವಾಪಸ್ ಬರುವ ಆತಂಕ ಇರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Border Dispute | ಲಾಥೂರ್‌, ಸೊಲ್ಲಾಪುರ, ಕೊಲ್ಹಾಪುರವನ್ನೂ ಕರ್ನಾಟಕಕ್ಕೆ ಸೇರಿಸಿ: ಕನ್ನಡಪರ ಸಂಘಟನೆಗಳ ಪ್ರತಿಭಟನೆ

Exit mobile version