Site icon Vistara News

ರಕ್ತಸಿಕ್ತ ಅಂಗೈ ಫೋಟೋ ಶೇರ್ ಮಾಡಿ, ಪತ್ನಿ ವಿರುದ್ಧ ಟ್ವಿಟರ್​ನಲ್ಲಿ ದೂರು ಕೊಟ್ಟ ಪತಿ; Men Too ಹ್ಯಾಷ್​ಟ್ಯಾಗ್​ ಹಾಕಿ ಆಕ್ರೋಶ

Yadunandan

ಬೆಂಗಳೂರು: ಯದುನಂದನ್​ ಆಚಾರ್ಯ ಎಂಬುವರು ತಮ್ಮ ಟ್ವಿಟರ್ ಖಾತೆಯ ಮೂಲಕ ಪತ್ನಿ ವಿರುದ್ಧ ದೂರು ನೀಡಿದ್ದಾರೆ. ಗಾಯವಾಗಿ, ರಕ್ತ ಸುರಿಯುತ್ತಿರುವ ತಮ್ಮ ಅಂಗೈ ಫೋಟೋ ಶೇರ್ ಮಾಡಿಕೊಂಡ ಅವರು, ‘ನನ್ನ ಪತ್ನಿ ಚಾಕುವಿನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಅದರ ಪರಿಣಾಮ ಇದು. ಇಂಥ ದೌರ್ಜನ್ಯ ಎಸಗುವ ನನ್ನ ಪತ್ನಿಯಿಂದ ನನ್ನನ್ನು ರಕ್ಷಿಸಲು ಯಾರಾದರೂ ಬರುತ್ತೀರಾ? ಯಾರೂ ಬರುವುದಿಲ್ಲ ಎಂದು ನನಗೆ ಗೊತ್ತು, ಯಾಕೆಂದರೆ ನಾನೊಬ್ಬ ಪುರುಷ. ನಾನು ಆಕೆ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲು ಮಾಡಬಹುದೇ? ಅದೂ ಆಗುವುದಿಲ್ಲ. ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೇನಾ?’ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ತಮ್ಮ ಈ ಟ್ವೀಟ್​ಗೆ Men Too ಎಂಬ ಹ್ಯಾಷ್​ಟ್ಯಾಗ್​ ಕೊಟ್ಟಿದ್ದಾರೆ. ಪ್ರಧಾನಿ ಕಚೇರಿ, ಸಚಿವ ಕಿರಣ್​ ರಿಜಿಜು, ನ್ಯಾಯ ಪ್ರಯಾಸ್ ಫೌಂಡೇಶನ್ (ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಲಿಂಗ ತಾರತಮ್ಯ ಕಾನೂನುಗಳ ವಿರುದ್ಧ ಹೋರಾಟ ಮಾಡುವ ಫೌಂಡೇಶನ್​), ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ ಅವರ ಟ್ವಿಟರ್​ ಅಕೌಂಟ್​​ಗಳನ್ನು ಟ್ಯಾಗ್​ ಮಾಡಿದ್ದಾರೆ. ಅದಾದ ಬಳಿಕ ಯದುನಂದನ್​ ಆಚಾರ್ಯ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಪೊಲೀಸರು, ‘ನೀವು ವಿವರವಾಗಿ ದೂರು ಕೊಡಿ. ನಿಮ್ಮ ಕಾಂಟಾಕ್ಟ್​ ನಂಬರ್​ ಕೂಡ ಕೊಡಿ’ ಎಂದು ಹೇಳಿದ್ದಾರೆ.

ಯದುನಂದನ್​ ಆಚಾರ್ಯ ಅವರ ಟ್ವೀಟ್​ಗೆ ಹಲವರು ಕಮಂಟ್ ಹಾಕುತ್ತಿದ್ದಾರೆ. ಇಂಥ ದೌರ್ಜನ್ಯ, ನಿಂದನೆಯನ್ನು ಸಹಿಸಿಕೊಂಡು ಯಾಕಾದರೂ ಜತೆಯಲ್ಲಿ ಇರುತ್ತೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಅದರಲ್ಲಿ ಎನ್​.ರಾಮದಾಸ್ ಅಯ್ಯರ್​ ಎಂಬುವರು ಒಬ್ಬರು ಕಮೆಂಟ್ ಮಾಡಿ, ಒಂದು ಫೋಟೋ ಶೇರ್​ ಮಾಡಿದ್ದಾರೆ. ಅವರ ಕೈಯಿಗೆ ಬ್ಯಾಂಡೇಜ್​ ಹಾಕಿಕೊಂಡಿರುವ ಫೋಟೋ ಟ್ವೀಟ್ ಮಾಡಿ, ‘ನನ್ನ ಪತ್ನಿ ನನಗಾಗಿ ಕೊಟ್ಟ ದಸರಾ ಮತ್ತು ಬರ್ತ್​ ಡೇ ಗಿಫ್ಟ್​’ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ರಾಮದಾಸ್​ 2019ರಲ್ಲಿ ತನ್ನ ಮೇಲೆ ಪತ್ನಿ ಹಲ್ಲೆ ಮಾಡಿದ್ದನ್ನು ಇಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Conviction Rate | ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಆಸ್ಪದ, ಶಿಕ್ಷೆ ಪ್ರಮಾಣ ದೇಶದಲ್ಲೇ ಗರಿಷ್ಠ

Exit mobile version