Site icon Vistara News

ಮಂಗಳೂರು ಸ್ಫೋಟ : ಕುಕ್ಕರ್‌ ಬ್ಲಾಸ್ಟ್‌ನಲ್ಲಿ ಗಾಯಗೊಂಡ ರಿಕ್ಷಾ ಚಾಲಕಗೆ ʻಬೆಳದಿಂಗಳುʼ; ಮಾ. 22ಕ್ಕೆ ಮನೆ ಹಸ್ತಾಂತರ

Mangaore blast house

#image_title

ಮಂಗಳೂರು: ಕಳೆದ ವರ್ಷದ ನವೆಂಬರ್‌ 19ರಂದು ಸಂಜೆ ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ (ಮಂಗಳೂರು ಸ್ಫೋಟ) ಗಂಭೀರವಾಗಿ ಗಾಯಗೊಂಡು ಬಳಿಕ ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮನೆಯನ್ನು ಗುರುಬೆಳದಿಂಗಳು ಫೌಂಡೇಶನ್ 6 ಲಕ್ಷ ರೂಪಾಯಿ ಸುಂದರವಾಗಿ ಮನೆ ನವೀಕರಣ ಮಾಡಿದೆ. ಅದರ ಹಸ್ತಾಂತರ ಕಾರ್ಯಕ್ರಮ ಮಾರ್ಚ್‌ 22ರ ಯುಗಾದಿ ದಿನದಂದು ನಡೆಯಲಿದೆ.

ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿ ಅವರನ್ನು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರು ಇತ್ತೀಚೆಗೆ ಭೇಟಿಯಾಗಿದ್ದರು. ಆಗ ಪುರುಷೋತ್ತಮ ಅವರು ತನ್ನ ನೋವನ್ನು ತೋಡಿಕೊಂಡಿದ್ದರು.

ಮುಂದಿನ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎಂಬ ಆಸೆ ಕೈಗೂಡುವ ಸಾಧ್ಯತೆಗಳಿಲ್ಲ ಎಂದು ನೋವಿನಿಂದ ಹೇಳಿದ್ದರು.

ʻಈ ವೇಳೆ “ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ” ಎಂದು ಪದ್ಮರಾಜ್‌ರವರು ಅವರಿಗೆ ಮನೋಸ್ಥೈರ್ಯ ತುಂಬಿದ್ದರು.

ಮಾತು ಕೊಟ್ಟ ಮರುದಿನದಿಂದಲೇ ಮನೆಯನ್ನು ಸುಸಜ್ಜಿತವಾಗಿ ನವೀಕರಿಸಲು ಪ್ರಾರಂಭಿಸಿದ ಸಂಸ್ಥೆ ಇದೀಗ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ಮನೆಯನ್ನು ನವೀಕರಿಸಿ ಕೊಟ್ಟಿದೆ‌. ಮಾರ್ಚ್ 22ರ ಯುಗಾದಿ ಹಬ್ಬದಂದು ಬೆಳಗ್ಗೆ 10 ಗಂಟೆಗೆ ಮನೆ ಹಸ್ತಾಂತರ ನಡೆಯಲಿದೆ.

ನವೆಂಬರ್‌ 19ರಂದು ಪಡೀಲ್‌ ಕಡೆಗೆ ಬಾಡಿಗೆಗೆ ಹೋಗಿದ್ದ ಪುರುಷೋತ್ತಮ ಅವರಿಗೆ ಪಂಪ್‌ವೆಲ್‌ ಕಡೆಗೆ ಬಾಡಿಗೆ ಸಿಕ್ಕಿತ್ತು. ಅಲ್ಲಿಂದ ಪಂಪ್‌ವೆಲ್‌ ಕಡೆಗೆ ಬರುತ್ತಿದ್ದಂತೆಯೇ ನಾಗುರಿ ಬಳಿ ಬರುತ್ತಿದ್ದಂತೆಯೇ ರಿಕ್ಷಾದ ಒಳಗೆ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಇದರಲ್ಲಿ ಕುಕ್ಕರ್‌ ಹಿಡಿದುಕೊಂಡಿದ್ದ ಶಾರಿಕ್‌ ಮತ್ತು ಚಾಲಕರಾಗಿದ್ದ ಪುರುಷೋತ್ತಮ ಗಾಯಗೊಂಡಿದ್ದರು. ಪುರುಷೋತ್ತಮ ಅವರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಅವರಿಗೆ ಸರಕಾರ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಕೆಲವು ವೈಯಕ್ತಿಕ ನೆರವನ್ನೂ ನೀಡಿದ್ದರು. ಇದೀಗ ಗುರು ಬೆಳದಿಂಗಳು ತಂಡ ಮನೆಯನ್ನು ನವೀಕರಣ ಮಾಡಿ ಕೊಟ್ಟಿದೆ.

ಇದನ್ನೂ ಓದಿ ಮಂಗಳೂರು ಸ್ಪೋಟ | ಕೇರಳದ ಕಾಡುಗಳೇ ಉಗ್ರರಿಗೆ ತರಬೇತಿ ಶಾಲೆ!

Exit mobile version