ಬಳ್ಳಾರಿ: ಮಂಗಳೂರಿನ ನಾಗುರಿ ಬಳಿ ಆಟೋದಲ್ಲಿ ಉಂಟಾದ ಸ್ಫೋಟದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಶನಿವಾರ ಸಂಜೆ 4.45ರ ಹೊತ್ತಿಗೆ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯನ್ನು ಗಂಭೀರವಾಗ ಪರಿಗಣಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಸ್ಫೋಟಕ್ಕೆ ಬಳಸಿದ್ದು ಐಇಡಿ ಸ್ಫೋಟಕ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆಟೋ ಸ್ಫೋಟವಾದಾಗ ಅದರಲ್ಲಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತನದ್ದು ನಕಲಿ ಆಧಾರ್ಕಾರ್ಡ್, ಅದರಲ್ಲಿ ಇದ್ದಿದ್ದು ಹುಬ್ಬಳ್ಳಿ ವಿಳಾಸ ಎಂಬಿತ್ಯಾದಿ ಹತ್ತು-ಹಲವು ಮಾಹಿತಿಗಳೂ ಬೆಳಕಿಗೆ ಬಂದಿವೆ. ಇದಕ್ಕೆ ಉಗ್ರಲಿಂಕ್ ಇದೆ. ಇದರ ಹಿಂದೆ ಬಹುದೊಡ್ಡ ಜಾಲವೇ ಇದೆ ಎಂದಿದ್ದಾರೆ.
ರಾಷ್ಟ್ರೀಯ ತನಿಖಾ ದಳವೂ ಮಂಗಳೂರಿಗೆ ಭೇಟಿ ನೀಡಿ ತನಿಖೆ ನಡೆಸುತ್ತಿದೆ. ಸದ್ಯ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಇದ್ದು, ಅವನು ಪೂರ್ತಿ ಗುಣಮುಖನಾದ ಬಳಿಕ ವಿಚಾರಣೆಯನ್ನು ಇನ್ನಷ್ಟು ವೇಗವಾಗಿ ನಡೆಸಬಹುದು. ಆತ ಕೊಯಮತ್ತೂರ್ನಲ್ಲಿ ಸುತ್ತಾಟ ನಡೆಸಿದ್ದು, ಅವನಿಗೆ ಉಗ್ರ ಲಿಂಕ್ ಇರುವುದು ಹೌದು. ನಿಷೇಧಿತ ಸಂಘಟನೆ ಪಿಎಫ್ಐ ಜತೆಗೂ ಸಂಪರ್ಕ ಇತ್ತಾ ಎಂಬುದು ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: Mangalore Blast | ಸ್ಫೋಟ ತನಿಖೆಗೆ ಆಗಮಿಸಿದ ಎನ್‌ಐಎ ತಂಡ; ಉಗ್ರ ಕೃತ್ಯ ಆಯಾಮದಲ್ಲಿ ಪರಿಶೀಲನೆ