ಮಂಗಳೂರು: ಶನಿವಾರ ಸಂಜೆ ಮಂಗಳೂರಿನ ನಾಗೂರಿ ಬಳಿ ನಡೆದ ಆಟೋ ಸ್ಫೋಟ ಒಂದು ಉಗ್ರಕೃತ್ಯ ಎಂದೇ ಹೇಳಲಾಗುತ್ತಿದ್ದು, ಅದರಲ್ಲಿದ್ದ ಪ್ರಯಾಣಿಕನ ಬಗ್ಗೆ ವಿವಿಧ ಮಾಹಿತಿಗಳು ಒಂದರ ಬಳಿಕ ಒಂದು ಹೊರಬೀಳುತ್ತಿವೆ. ಆ ಪ್ರಯಾಣಿಕನ ಬಳಿ ಒಂದು ಆಧಾರ್ಕಾರ್ಡ್ ಸಿಕ್ಕಿತ್ತು. ಅದರಲ್ಲಿ ಹೆಸರು ಪ್ರೇಮರಾಜ್ ಹುಟಗಿ ಎಂದಿತ್ತು. ಆದರೆ ಬಳಿಕ ಗೊತ್ತಾಗಿದ್ದು, ಆ ಪ್ರಯಾಣಿಕನ ಬಳಿ ಇದ್ದಿದ್ದು ನಕಲಿ ಆಧಾರ್ ಕಾರ್ಡ್. ಪ್ರೇಮರಾಜ್ ಹುಟಗಿ ಮೂಲತಃ ಹುಬ್ಬಳ್ಳಿಯವರು. ಸ್ಫೋಟಗೊಂಡ ಆಟೋದಲ್ಲಿದ್ದ ಪ್ರಯಾಣಿಕನಿಗೂ, ಪ್ರೇಮರಾಜ್ ಹುಟಗಿಗೂ ಸಂಬಂಧವಿಲ್ಲ. ಈತನೇ ಬೇರೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
ಈ ಮಧ್ಯೆ ಇನ್ನೊಂದು ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ಬ್ಲಾಸ್ಟ್ ಆದ ಆಟೋದಲ್ಲಿದ್ದ ಪ್ರಯಾಣಿಕನ ನಿಜವಾದ ಹೆಸರು ಯೂನಸ್ ಖಾನ್ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯೂನಸ್ ಖಾನ್ ಎಂಬ ಹೆಸರು ಈಗ ಬೆಳಕಿಗೆ ಬಂದಿದ್ದರೂ ನಿಜಕ್ಕೂ ಅದು ಆ ಪ್ರಯಾಣಿಕನ ಅಸಲಿ ಹೆಸರಾ? ಅಥವಾ ಅದೂ ಕೂಡ ನಕಲಿಯಾ? ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಪೊಲೀಸರು ಯೂನುಸ್ ಖಾನ್ ಹೆಸರಿನ ಬೆನ್ನತ್ತಿ, ತನಿಖೆ ಶುರು ಮಾಡಿದ್ದಾರೆ.
ಮಂಗಳೂರು ಸ್ಫೋಟದ ತನಿಖೆಗಾಗಿ ಎನ್ಐಎ ತಂಡ ಈಗಾಗಲೇ ಅಲ್ಲಿಗೆ ತೆರಳಿದೆ. ಇನ್ನು ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ಕಾರ್ಡ್ನ ನಿಜವಾದ ಮಾಲೀಕ ಪ್ರೇಮರಾಜ್ ಹುಟಗಿ, ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಆದೇಶದಂತೆ ಈಗಾಗಲೇ ತುಮಕೂರು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ ವಾಡ್ರನ್ನು ಭೇಟಿ ಮಾಡಿದ್ದಾರೆ. ಹಾಗೇ, ತಮ್ಮ ಆಧಾರ್ ಕಾರ್ಡ್ ಎರಡು ಬಾರಿ ಕಳೆದು ಹೋಗಿದೆ ಎಂದೂ ತಿಳಿಸಿ, ದೂರು ನೀಡಿದ್ದಾರೆ. ಈ ಬಗ್ಗೆಯೂ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.