ಮಂಗಳೂರು: ಇಲ್ಲಿನ ಸುಳ್ಯ ಗಾಂಧಿ ನಗರ ಸಮೀಪ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ (Wall collapse) ಕುಸಿದಿದ್ದು, ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಸೋಮಶೇಖರ ರೆಡ್ಡಿ (45) ಮತ್ತು ಈತನ ಪತ್ನಿ ಶಾಂತ (40) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಕಾರ್ಮಿಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಅಬೂಬಕ್ಕರ್ ಎಂಬವರ ಮನೆಯ ಹಿಂಬದಿ ತಡೆಗೋಡೆ ನಿರ್ಮಾಣ ಮಾಡುವಾಗ ಗುಡ್ಡ ಕುಸಿದಿದೆ. ಒಟ್ಟು 7 ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಗುಡ್ಡ ಕುಸಿದಿದೆ. ಈ ವೇಳೆ ಮೂವರು ಮಣ್ಣಿನಡಿ ಸಿಲುಕಿ ಪ್ರಾಣಬಿಟ್ಟಿದ್ದರೆ ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು ಜೆಸಿಬಿ ಮೂಲಕ ಮೃತದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಮೃತ ಕಾರ್ಮಿಕರ ದಂಪತಿ ಗದಗ ಜಿಲ್ಲೆಯ ಮುಂಡರಗಿ ನಿವಾಸಿಗಳು ಎಂದು ತಿಳಿದು ಬಂದಿದೆ. ಮೂವರ ಮೃತದೇಹಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಶಾಸಕ ಅಂಗಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಘಟನೆಗೆ ಕಾರಣ ಏನು ಎಂಬುದರ ಸಂಬಂಧ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಇತ್ತ ಕಾರ್ಮಿಕರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ