Site icon Vistara News

ಮಂಗಳೂರು ಸ್ಫೋಟ | ಎನ್‌ಐಎ ಎಫ್‌ಐಆರ್‌ ದಾಖಲಿಸಿ ನಾಲ್ಕೇ ದಿನಕ್ಕೆ ಮಂಗಳೂರಲ್ಲಿ ಸ್ಫೋಟಿಸಿದ್ದ ಶಾರಿಕ್‌!

smg terror trail blast NIA FIR

ಶಿವಮೊಗ್ಗ/ಬೆಂಗಳೂರು: ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರರಾದ ತೀರ್ಥಹಳ್ಳಿಯ ಶಾರಿಕ್‌, ಮಾಜ್‌ ಹಾಗೂ ಶಿವಮೊಗ್ಗದ ಸೈಯದ್‌ ಯಾಸಿನ್‌ ನಡೆಸಿದ್ದ ಟ್ರಯಲ್‌ ಬ್ಲಾಸ್ಟ್‌ ಹಾಗೂ ಆ ವೇಳೆ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದ್ದ ಪ್ರಕರಣ ಸಂಬಂಧ ನ. ೧೫ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎಫ್‌ಐಆರ್‌ ದಾಖಲಿಸಿತ್ತು. ಅದಾಗಿ ಕೇವಲ ನಾಲ್ಕೇ ದಿನದಲ್ಲಿ ಶಾರಿಕ್‌ ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದಾನೆ.

ತುಂಗಾ ನದಿ ತೀರದಲ್ಲಿ ಶಂಕಿತ ಉಗ್ರರು ನಡೆಸಿದ್ದ ಟ್ರಯಲ್‌ ಬ್ಲಾಸ್ಟ್‌, ಅದೇ ವೇಳೆ ರಾಷ್ಟ್ರಧ್ವಜವನ್ನು ಸುಟ್ಟು ಹಾಕಿದ್ದ ಪ್ರಕರಣ ಹಾಗೂ ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರ ಮಾಡಲಾಗಿದ್ದು, ಎನ್‌ಐಎ ಎಫ್‌ಐಆರ್‌ ದಾಖಲು ಮಾಡಿಕೊಂಡಿತ್ತು.

ಸದ್ಯ ಮಂಗಳೂರು ಸ್ಫೋಟದ ಪ್ರಮುಖ ಆರೋಪಿ ಶಾರಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆತನ ಸಹಚರರಾದ ತೀರ್ಥಹಳ್ಳಿಯ ಮಾಜ್ ಮತ್ತು ಶಿವಮೊಗ್ಗದ ಸೈಯದ್‌ ಯಾಸಿನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಗಾಯಾಳು ಆಟೋ ಚಾಲಕಗೆ 50,000 ರೂ. ಸಹಾಯ, ಶಾರಿಕ್‌ ಮುಖ ನೋಡದ ಆರಗ ಜ್ಞಾನೇಂದ್ರ

ನ.೧೫ರಂದು ದಾಖಲಾಗಿದ್ದ ಪ್ರಕರಣ
ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಸುಟ್ಟು ಹಾಕಿದ್ದ ಪ್ರಕರಣವು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ಈ ಸಂಬಂಧ ಶಾರಿಕ್‌, ಮಾಜ್, ಯಾಸೀನ್ ವಿರುದ್ಧ ಎನ್‌ಐಎ ನ. ೧೫ರಂದು ಸೆಕ್ಷನ್‌ 120b, 121, 121A, 34ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿತ್ತು. ಸೆಕ್ಷನ್‌ 120B ಒಳಸಂಚಿಗೆ ಸಂಬಂಧಪಟ್ಟಿದ್ದರೆ, ಸೆಕ್ಷನ್‌ 121 ರಾಷ್ಟ್ರದ ವಿರುದ್ಧ ಸಮರ ಹಾಗೂ ಸೆಕ್ಷನ್‌ 121a ರಾಷ್ಟ್ರದ ವಿರುದ್ಧ ಸಮರ ಸಾರಲು ಒಳಸಂಚಿಗೆ ಸಂಬಂಧಪಟ್ಟಿದ್ದಾಗಿದೆ.

ಉಗ್ರ ಕೃತ್ಯ ನಡೆಸಲು ಬಾಂಬ್‌ ತಯಾರಿಯಲ್ಲಿ ತೊಡಗಿದ್ದ ಶಾರಿಕ್‌ ಮತ್ತವನ ತಂಡವು, ತಾವು ತಯಾರಿಸಿದ ಬಾಂಬ್‌ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಸಂಬಂಧ ತುಂಗಾ ನದಿ ತೀರದ ಕೆಮ್ಮನಗುಂಡಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ ನಡೆಸಿದ್ದರು. ಈ ವೇಳೆ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಸಹ ಸುಟ್ಟಿದ್ದು, ಅದನ್ನು ವಿಡಿಯೊ ಮಾಡಿಕೊಂಡಿದ್ದರು. ಈ ಎಲ್ಲ ಅಂಶಗಳು ಬಂಧನದ ವೇಳೆ ತಿಳಿದುಬಂದಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ದೊಡ್ಡಪೇಟೆ ಠಾಣೆ ಪ್ರಕರಣವೂ ಹಸ್ತಾಂತರ
ಸೈಯದ್‌ ಯಾಸಿನ್‌ ತನ್ನ ಮನೆಯಲ್ಲಿ ಉಗ್ರ ಚಟುವಟಿಕೆ ಸಂಬಂಧ ಫೋನ್‌ ಸಂಭಾಷಣೆ, ಮಾಹಿತಿ, ಬಾಂಬ್‌ ತಯಾರಿ ನಡೆಸಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನೂ ಎನ್‌ಐಎ ವಹಿಸಿಕೊಂಡು, ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಈ ಪ್ರಕರಣಗಳ ತನಿಖೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್‌ ಶ್ವಾಸಕೋಶದಲ್ಲಿ ತುಂಬಿಕೊಂಡ ಹೊಗೆ, ವೆಂಟಿಲೇಟರ್‌ನಲ್ಲಿ ವಿಶೇಷ ನಿಗಾ

Exit mobile version