ಮಂಗಳೂರು ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ಬಗ್ಗೆ ಹೆಚ್ಚೆಚ್ಚು ತನಿಖೆ ನಡೆದಷ್ಟೂ ಹೊಸ ವಿಷಯಗಳು ಹೊರಬೀಳುತ್ತಿವೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವನಾದ ಈತ ಹಲವು ಉಗ್ರಕೃತ್ಯಗಳನ್ನು ನಡೆಸಿ ಪೊಲೀಸರಿಗೆ ಬೇಕಾದವನಾಗಿದ್ದ. ಆದರೆ ಯಾವಾಗಲೂ ತಪ್ಪಿಸಿಕೊಳ್ಳುತ್ತಿದ್ದ. ಈ ಸಲ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಹೋಗಿ, ತಾನೇ ಗಂಭೀರವಾಗಿ ಗಾಯಗೊಂಡು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಶಾರಿಕ್ ಅಂತಿಂಥಾ ಕ್ರಿಮಿನಲ್ ಅಲ್ಲ. ತಂತ್ರಜ್ಞಾನಗಳ ಬಗ್ಗೆ ಅರಿತವನಾಗಿದ್ದ ಜತೆ, ಅದನ್ನು ತನಗೆ ಅಪಾಯವಾಗದಂತೆ, ತಾನು ಸಿಕ್ಕಿಬೀಳದಂತೆ ಹೇಗೆ ಬಳಸಬೇಕು ಎಂಬುದನ್ನೂ ತಿಳಿದುಕೊಂಡವನಾಗಿದ್ದ ಎಂಬುದನ್ನು ಗುಪ್ತಚರ ಇಲಾಖೆ ಹೇಳಿದ್ದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ತನಿಖೆಯ ವೇಳೆ ಪೊಲೀಸರು, ತನಿಖಾ ದಳಗಳು ಏನೆಲ್ಲ ಸಂಪರ್ಕಗಳ ಜಾಡು ಹಿಡಿಯಬಹುದು? ತನಿಖಾ ಸಿಬ್ಬಂದಿ ಟೆಕ್ನಾಲಜಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನೂ ಆತ ತಿಳಿದುಕೊಂಡು ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಶಾರಿಕ್ ಯಾವತ್ತೂ ಫೋನ್ ಮತ್ತು ಸಿಮ್ ಕಾರ್ಡ್ಗಳನ್ನು ಅವನ ನಿಜವಾದ ಹೆಸರಿನಲ್ಲಿ ಕೊಂಡುಕೊಳ್ಳುತ್ತಿರಲಿಲ್ಲ. ಫೇಕ್ ಐಡಿಗಳನ್ನು ಸೃಷ್ಟಿಸಿಕೊಂಡೇ ಸಿಮ್ಗಳನ್ನು ಖರೀದಿ ಮಾಡುತ್ತಿದ್ದ. 2018ರಿಂದಲೇ ಆತ ಉಗ್ರಕೃತ್ಯದಲ್ಲಿ ತೊಡಗಿಸಿಕೊಂಡಿದ್ದು, 2020ರ ನಂತರ ಪೂರ್ತಿ ಅದರಲ್ಲೇ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ.
೨೦೨೦ರ ನವೆಂಬರ್ ೨೭ರಂದು ಅಪಾರ್ಟ್‌ಮೆಂಟ್‌ನ ಗೋಡೆಯೊಂದರ ಮೇಲೆ ಹಿಂದುಗಳಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಬರಹ ಬರೆದಿದ್ದ. ಅದು ಹೆಚ್ಚಿನ ಗಮನ ಸೆಳೆಯದೆ ಇದ್ದ ಕಾರಣಕ್ಕೆ ಆತ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಗೋಡೆ ಮೇಲೆ ಮತ್ತೊಂದು ಬೆದರಿಕೆ ಹಾಕಿದ್ದ. ʻʻಏನು ನಿಮಗೆ ಪಾಠ ಕಲಿಸಲು ಲಷ್ಕರೆ ತಯ್ಬಾ ಸಂಘಟನೆಯನ್ನು ಕರೆಸಬೇಕಾʼʼ ಎನ್ನುವ ಧಾಟಿಯಲ್ಲಿ ಆ ಬರಹ ಇತ್ತು. ಈ ಪ್ರಕರಣದಲ್ಲಿ ೨೦೨೦ರ ಡಿಸೆಂಬರ್ ೬ರಂದು ಆತನ ಬಂಧನವಾಗಿತ್ತು. ಆದರೆ, ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣದಿಂದ ೨೦೨೧ರ ಸೆಪ್ಟೆಂಬರ್‌ನಲ್ಲಿ ಆತನ ಬಿಡುಗಡೆಯಾಗಿತ್ತು.
ಹೀಗೆ ಬಿಡುಗಡೆಯಾದವನು ಸುಮ್ಮನೆ ಹೋಗಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಮಂಗಳೂರಿನ ಮಹಮ್ಮದ್ ಮಾಝ್ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಎಂಬವರನ್ನು ಸೇರಿಸಿಕೊಂಡು ಬಾಂಬ್ ತಯಾರಿಕೆಯ ಕೃತ್ಯಕ್ಕೆ ಮುಂದಾಗಿದ್ದ. ಶಿವಮೊಗ್ಗ ತುಂಗಾ ತೀರ ಮತ್ತು ಮಂಗಳೂರಿನ ಬಂಟ್ವಾಳದ ನೇತ್ರಾವತಿ ತೀರದಲ್ಲಿ ಬಾಂಬ್‌ಗಳ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದ. ಹೀಗೆ ಹಲವು ಕೃತ್ಯಗಳ ಆರೋಪಿಯೀಗ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನು ಸಂಪೂರ್ಣ ಗುಣಮುಖನಾದ ನಂತರ ಅವನನ್ನು ಪೊಲೀಸರು ಇನ್ನಷ್ಟು ವಿಚಾರಣೆಗೆ ಒಳಪಡಿಸಲಿದ್ದಾರೆ.
ಇದನ್ನೂ ಓದಿ: ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಮೊಬೈಲ್ ಸಿಮ್ ಪಡೆಯಲು ಕೊಟ್ಟ ವಿಳಾಸ ಸಂಡೂರಿನ ಟೆಕ್ಕಿಯದು!