ಗದಗ: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರವು (Manja thread) ಬೈಕ್ ಸವಾರರ ಕಂಠಕ್ಕೆ ಕಂಟಕವಾಗಿದೆ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ಹಿನ್ನೆಲೆ ಗಾಳಿಪಟ ಹಾರಿಸುವ ಪರಿಪಾಠ ಇದೆ. ಆದರೆ ಇದೆ ಸಂಭ್ರಮವು ಬೈಕ್ ಸವಾರರಿಗೆ ಸಂಚಕಾರ ತಂದೊಡ್ಡಿದೆ.
ರಾಜ್ಯದಲ್ಲಿ ಚೈನೀಸ್ ಮಾಂಜಾ ದಾರ ಮಾರಾಟವು ನಿಷೇಧ ಇದ್ದರೂ, ಗದಗ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ಕಡಿವಾಣ ಬಿದ್ದಿಲ್ಲ. ಕಾಳಸಂತೆಗಳಲ್ಲಿ ಈ ಅಪಾಯಕಾರಿ ದಾರ ಮಾರಾಟದಿಂದಾಗಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದಲ್ಲಿ ಭಾನುವಾರ ಕಾರ ಹುಣ್ಣಿಮೆಯ ದಿನದಂದು ಹಾರಿಸಿದ ಗಾಳಿಪಟದ ದಾರದಿಂದಾಗಿ ರೈಲ್ವೆ ಪೊಲೀಸ್ ಸೇರಿ ನಾಲ್ಕೈದು ಜನರಿಗೆ ಗಾಯಗಳಾಗಿವೆ. ಬೈಕ್‌ನಲ್ಲಿ ಹೋಗುವಾಗ ಕತ್ತು, ಕೈ-ಕಾಲುಗಳಿಗೆ ಹರಿತವಾದ ದಾರದಿಂದ ಗಾಯಗಳಾಗಿದೆ. ಈ ರೀತಿಯ ಅವಘಡಗಳು ನಡೆಯುತ್ತಿದ್ದರೂ, ಸಂಬಂಧಪಟ್ಟವರು ಗಪ್ ಚುಪ್ ಆಗಿದ್ದಾರೆ.
ಅಪಾಯಕಾರಿ ಮಾಂಜಾ ದಾರಕ್ಕೆ ಕಡಿವಾಣ ಹಾಕುವಂತೆ ವಿಸ್ತಾರ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ಆದರೆ ಅಧಿಕಾರಿ ವರ್ಗ ಮಾತ್ರ ಕೈ ಕಟ್ಟಿ ಕುಳಿತು ನಿರ್ಲಕ್ಷ್ಯತನ ತೋರಿತ್ತು. ಇದರ ಪರಿಣಾಮ ಈಗ ಕಾರ ಹುಣ್ಣಿಮೆ ವೇಳೆ ಮಾಂಜಾ ದಾರದಲ್ಲಿ ಗಾಳಿಪಟ ಹಾರಿಸಿದ ಕಾರಣದಿಂದಾಗಿ ಸವಾರರು ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ: Attempt Murder Case: ಜೈ ಶ್ರೀ ರಾಮ್ ಅನ್ನಂಗಿಲ್ಲ, ಈಗಿರೋದು ನಮ್ಮ ಸರ್ಕಾರವೆಂದು ಚಾಕು ಇರಿದ ಗುಂಪು!
ಕಳೆದ 15 ದಿನಗಳ ಹಿಂದಷ್ಟೇ ಚೈನೀಸ್ ಮಾಂಜಾ ದಾರ ಮಾರಾಟವನ್ನು ತಡೆಯುವಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯತನ ತೋರಿಸಿದ್ದಾರೆಂದು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ