ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿರುವ ಫ್ಲೈ ಓವರ್‌ಗಳು ಕಳಪೆ ಕಾಮಗಾರಿಯಿಂದಾಗಿ (Poor work) ಆಗಾಗ ಸುದ್ದಿ ಆಗುತ್ತಲೇ ಇರುತ್ತವೆ. ಇದೀಗ ವೆಸ್ಟ್ ಆಫ್ ಕಾರ್ಡ್ ರೋಡ್ (West of Card Road) ಸಮೀಪವಿರುವ ಮಂಜುನಾಥ ನಗರ ಫ್ಲೈ ಓವರ್‌ನಲ್ಲಿ ಬಿರುಕು ಬಿಟ್ಟಿರುವುದು, ಸ್ಲಾಬ್‌ಗಳು ಹೊರ ಬರುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಅಂದಹಾಗೆ, ಸಾರ್ವಜನಿಕರ ಒತ್ತಾಯದ ಮೇರೆಗೆ ಮಂಜುನಾಥನಗರ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಜನರು ಫ್ಲೈ ಓವರ್ ಆಯಿತು ನೆಮ್ಮೆದಿಯಾಗಿ ಓಡಾಡಬಹುದು ಎಂದುಕೊಂಡರು. ಆದರೆ ಒಂದಲ್ಲ ಎರಡಲ್ಲ ಹಲವಾರು ಬಾರಿ ಈ ಮೇಲ್ಸೇತುವೆ ದುರಸ್ತಿ ಕಾರ್ಯಕ್ಕೆ ಬರುತ್ತಿದ್ದು, ಪ್ರತಿ ಬಾರಿಯೂ ಬಿಬಿಎಂಪಿ ನೆಪಗಳನ್ನು ಹೇಳುತ್ತಾ ತೇಪೆ ಹಚ್ಚುವ ಕಾರ್ಯ ಮಾಡಿತ್ತು.
ಆದರೆ ಬಿಬಿಎಂಪಿ ಮೊದಲ ಬಾರಿಗೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬುದನ್ನು ಒಪ್ಪಿಕೊಂಡಿದ್ದು, ಐಐಎಸ್‌ಸಿ (IISC) ಗೆ ಕಾಮಗಾರಿಯ ಕುರಿತು ಪರೀಕ್ಷೆ ಮಾಡಲು ತಿಳಿಸಿದೆ. ಈ ಬೆನ್ನಲ್ಲೇ ಐಐಎಸ್‌ಸಿ (IISC) ತಜ್ಞರು ಫ್ಲೈ ಓವರ್‌ನ ಫಿಟ್‌ನೆಸ್ ಪರೀಕ್ಷೆಗೆ ಮುಂದಾಗಿದ್ದಾರೆ. ಮಂಗಳವಾರ (ಮೇ 2) ಸಂಪೂರ್ಣವಾಗಿ ಫ್ಲೈಓವರ್‌ನ ಸ್ಲ್ಯಾಬ್‌ಗಳಲ್ಲಿ 30 ಕಡೆ ಸೆನ್ಸಾರ್‌ಗಳನ್ನು ಅಳವಡಿಸಿದೆ. ಬಳಿಕ 30 ಟನ್ ಲೋಡ್‌ನ ಗಾಡಿಯನ್ನು ಬೇರೆ ಬೇರೆ ಸ್ಪೀಡ್‌ನಲ್ಲಿ ಸುಮಾರು 40 ಕಿ.ಮೀ.ಗಳಷ್ಟು ದೂರ ಓಡಾಡಿಸಿ, ಲೋಡ್ ಟೆಸ್ಟಿಂಗ್ ಅನ್ನು ಮಾಡಲಾಗಿದೆ. ಬರೋಬ್ಬರಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಟೆಸ್ಟಿಂಗ್ ಮಾಡಲಾಗುತ್ತಿದೆ.
ಇದನ್ನೂ ಓದಿ: Weather Report: ಇನ್ನೂ ಇದೆ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಮಳೆ ಅಬ್ಬರ, ಬೆಂಗಳೂರಲ್ಲಿ ಯಾವ ಥರ?
ತಜ್ಞರ ಈ ಪರೀಕ್ಷೆಗಳು ಮುಗಿದ 10 ದಿನಗಳಲ್ಲಿ ಮಂಜುನಾಥನಗರ ಫ್ಲೈ ಓವರ್ ಫಿಟ್ ಅಥವಾ ಅನ್‌ಫಿಟ್ ಎಂಬ ವರದಿಯನ್ನು ನೀಡಲಿದ್ದಾರೆ. ಕಾಮಗಾರಿ ಮಾಪನ ವಿಶ್ಲೇಷಣೆ (ಗೇಜ್ ಅನಾಲೈಸ್) ಮಾಡಲಾಗುತ್ತದೆ. ಒಂದು ವೇಳೆ ಇದು ಅನ್‌ಫಿಟ್ ಎಂಬುದು ತಿಳಿದರೆ ಮತ್ತೆ ಇದರ ದುರಸ್ತಿ ಕಾರ್ಯವನ್ನು ಪಾಲಿಕೆ ಆರಂಭ ಮಾಡಬೇಕಿದೆ. ಮೇಲ್ನೋಟಕ್ಕೆ ಫ್ಲೈ ಓವರ್ ಒಳಗಡೆ ಕಾಂಕ್ರಿಟ್ ಅನ್ನು ತುಂಬುವ ಕಾರ್ಯ ಮಾಡಬೇಕಾಗಿದೆ ಎಂದು ತಜ್ಞ ಚಂದ್ರ ಕಿಶನ್ ತಿಳಿಸಿದ್ದಾರೆ.