ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕವಾಗಿ ಸೃಷ್ಟಿಯಾಗುವ ವಿದ್ಯುನ್ಮಾನ (ಡಿಜಿಟಲ್) ಕಂದಕವನ್ನು ಯಶಸ್ವಿಯಾಗಿ ದಾಟಲು (SELCO India) ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮವು (ಡಿಇಪಿ) ಅತ್ಯುತ್ತಮ ಪರ್ಯಾಯ ಸಾಧನವಾಗಿದೆ ಎಂದು ನೆಕ್ಸ್ಟ್ ಎಜುಕೇಷನ್‌ನ ಉಪಾಧ್ಯಕ್ಷ ಮನಮೋಹನ್ ಲಾಲ್ವಾನಿ ಅಭಿಪ್ರಾಯಪಟ್ಟರು.
ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಗುರುವಾರ ನಡೆದ ಸೆಲ್ಕೊ ಸಂಸ್ಥೆಯ 29ನೇ ಸಂಸ್ಥಾಪನಾ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುನೆಸ್ಕೋ ಅಂದಾಜಿಸಿರುವಂತೆ ಭಾರತದಲ್ಲಿ ಸುಮಾರು 26 ಕೋಟಿ ಜನರಿಗೆ ಸರ್ಕಾರಿ ಶಾಲೆಗಳಲ್ಲಿರುವ ಡಿಜಿಟಲ್ ಸೌಲಭ್ಯಗಳು ಇನ್ನೂ ಕೈಗೆಟಕುತ್ತಿಲ್ಲ. ಹೀಗಾಗಿ ನಮ್ಮ ನಡುವೆ ಇರುವ ಇಂತಹ ಡಿಜಿಟಲ್ ಕಂದಕವನ್ನು ತುಂಬಬೇಕಿದೆ. ಸೆಲ್ಕೋ ಜತೆಗಿನ ಸಹಪಯಣದ ಸವಿನೆನಪಿಗಾಗಿ ನೆಕ್ಸ್ಟ್ ಎಜುಕೇಷನ್ ಸಂಸ್ಥೆಯು ರಾಜ್ಯದ ನಾಲ್ಕು ಸರ್ಕಾರಿ ಶಾಲೆಗಳಿಗೆ ಸಂಪೂರ್ಣ ಉಚಿತವಾಗಿ ವಿದ್ಯುನ್ಮಾನ ಶೈಕ್ಷಣಿಕ ವ್ಯವಸ್ಥೆಯ ಮೂಲಭೂತ ಸೌಕರ್ಯವನ್ನು ಒದಗಿಸಲಿದೆ ಎಂದು ಘೋಷಿಸಿದರು.
ಬೈಲಕುಪ್ಪೆಯ ತ್ಸೋ-ಇ-ಖಾಂಗಸರ್ ಚಾರಿಟಿ ಆಸ್ಪತ್ರೆಯ ಕಾಯನಿರ್ವಾಹಕ ಕಾರ್ಯದರ್ಶಿ ಸೋನಮ್ ಯೌಗ್ಯಾಲ್ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ವ್ಯವಸ್ಥೆಗಳೂ ಸೌರಮಯವಾಗುವುದರಲ್ಲಿ ಸಂಶಯವಿಲ್ಲ. ಅನಿಯಮಿತ ವಿದ್ಯುತ್ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ಈ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೆಕಿದ್ದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಅತ್ಯಂತ ತ್ವರಿತವಾಗಿ ಸೌರೀಕರಣಗೊಳ್ಳಬೇಕಿದೆ ಎಂದರು.
ಸಮಾರಂಭದಲ್ಲಿ ಸಾಧಕ ಮಹಿಳೆಯರಾದ ಕಲಬುರ್ಗಿಯ ಸೌರ ಉದ್ಯಮಿ ಭುವನೇಶ್ವರಿ, ಬೆಳಗಾವಿಯ ಸೌರ ಇಂಧನ ಸೇವೆಗಳ ಉದ್ಯಮಿ ರೇಣುಕಾತಾಯಿ ಪರಪ್ಪಗೊಳ್ ಮತ್ತು ಸೆಲ್ಕೊ ನೌಕರ ಎನ್. ಲೋಕೇಶ್ ಅವರನ್ನು ಹಾಗೂ ಸೌರಚಾಲಿತ ಶೈಕ್ಷಣಿಕ ಕಾರ್ಯಕ್ರಮ (ಡಿಇಪಿ)ವನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾಧನೆ ಮಾಡಿರುವ ಐದು ಶಾಲೆಗಳ ಶಿಕ್ಷಕ ಪ್ರತಿನಿಧಿಗಳನ್ನು ನೆಕ್ಸ್ಟ್ ಎಜುಕೇಷನ್ ವತಿಯಿಂದ ಗೌರವಿಸಲಾಯಿತು.
ಪುಸ್ತಕ ಬಿಡುಗಡೆ
ಸೆಲ್ಕೊ ಸಂಸ್ಥೆಯಿಂದ ಕಳೆದ ವರ್ಷ ರಾಜ್ಯಾದ್ಯಂತ ಪತ್ರಕರ್ತರಿಗಾಗಿ ಏರ್ಪಡಿಸಲಾಗಿದ್ದ 4 ಕಾರ್ಯಾಗಾರಗಳ ಅವಲೋಕನ ಕುರಿತ ಪುಸ್ತಕವನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸೆಲ್ಕೋ ಸಂಸ್ಥಾಪಕರು ಮತ್ತು ಮ್ಯಾಗ್ಸೆಸ್ಸೆ ಪುರಸ್ಕೃತರಾದ ಹರೀಶ್ ಹಂದೆ, ಸೆಲ್ಕೊ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ, ಸೆಲ್ಕೋ ಫೌಂಡೇಷನ್ ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ, ನಿರ್ದೇಶಕರಾದ ಹುದಾ ಜಾಫರ್, ಸೆಲ್ಕೋ ಇಂಡಿಯಾದ ಮಹಾ ಪ್ರಬಂಧಕರಾದ ಜಗದೀಶ್ ಪೈ ಹಾಗೂ ಸಿಬ್ಬಂದಿ ಹಾಜರಿದ್ದರು.