Site icon Vistara News

HD Kumaraswamy : ಎಚ್‌ಡಿಕೆ ಬ್ರಾಹ್ಮಣ ಸಿಎಂ ಹೇಳಿಕೆಯ ಹಿನ್ನೆಲೆ ಪರಿಶೀಲನೆ ಅಗತ್ಯ ಎಂದರು ಮಂತ್ರಾಲಯ ಶ್ರೀಗಳು

Kumaraswmay subudhendra sri

#image_title

ಬಾಗಲಕೋಟೆ: ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ (HD Kumaraswamy) ಅವರ ʻಬ್ರಾಹ್ಮಣ ಸಿಎಂʼ ಹೇಳಿಕೆ ಬಗ್ಗೆ ಮಂತ್ರಾಲಯದ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಹೇಳಿಕೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದಿದ್ದಾರೆ.

ʻʻಈ ಬಾರಿ ಗೆದ್ದರೆ ಬಿಜೆಪಿ ಬ್ರಾಹ್ಮಣರನ್ನು ಸಿಎಂ ಮಾಡಲು ಮುಂದಾಗಿದೆ. ಶೃಂಗೇರಿಯ ದೇವಳವನ್ನು ನಾಶ ಮಾಡಿದ ಪೇಶ್ವೆ ಡಿಎನ್‌ಎ ಹೊಂದಿರುವ ವ್ಯಕ್ತಿಯನ್ನು ಈ ಹುದ್ದೆಗೇರಿಸುವ ಸಂಚು ನಡೆಸಿದೆ.ʼʼ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಉದ್ದೇಶಿಸಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದು ಬ್ರಾಹ್ಮಣರ ವಿರುದ್ಧದ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿತ್ತು. ಆದರೆ, ಎಚ್‌.ಡಿ. ಕುಮಾರಸ್ವಾಮಿ ಮಾತ್ರ ಇದು ಕೇವಲ ಪೇಶ್ವೆಗಳ ಡಿಎನ್‌ಎ ಹೊಂದಿರುವ ವ್ಯಕ್ತಿಗಳಿಗೆ ಸೀಮಿತವಾದ ಹೇಳಿಕೆ ಎಂದು ಸ್ಪಷ್ಟನೆ ನೀಡಿದ್ದರು ಮಾತ್ರವಲ್ಲ ಹೇಳಿಕೆಯನ್ನು ಸಮರ್ಥಿಸಿದ್ದರು.

ಸುಬುಧೇಂದ್ರ ತೀರ್ಥರು ಹೇಳುವುದೇನು?

ಬಾಹ್ಮಣ ಮುಖ್ಯಮಂತ್ರಿ ವಿಚಾರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಆಡಿದ ಮಾತಿಗೆ ಪ್ರತಿಕ್ರಿಯಿಸಿದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು, ಕುಮಾರಸ್ವಾಮಿ, ದೇವೇಗೌಡರು ಕೂಡಾ ತುಂಬಾ ದೈವ ಭಕ್ತರು. ಬ್ರಾಹ್ಮಣರು, ಗುರು ಹಿರಿಯರಲ್ಲಿ ಅತ್ಯಂತ ಶ್ರದ್ಧಾ ಭಕ್ತಿ ಇರುವಂತವರು. ದಂಪತಿ ಸಮೇತವಾಗಿ ಮಂತ್ರಾಲಯಕ್ಕೆ ಆಗಮಿಸಿದ್ದರು. ರಾಯರ ಸೇವೆ ಮಾಡಿ ಆಶೀರ್ವಾದ ಪಡೆದಿದ್ದಾರೆ. ಯಾವತ್ತೂ ಕೂಡಾ ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿಲ್ಲ ಎಂದು ಭಾವಿಸಿದ್ದೇವೆ. ಒಂದೊಮ್ಮೆ ಅವರು ಹಾಗೆ ಮಾತನಾಡಿದ್ದಾರೆ ಅಂದರೆ ಯಾವ ಹಿನ್ನೆಲೆಯಲ್ಲಿ ಆ ರೀತಿಯಾಗಿ ಮಾತನಾಡಿದ್ದಾರೆ ಎನ್ನುವುದನ್ನು ನಾವು ಪರಿಶೀಲಿಸಬೇಕಿದೆʼʼ ಎಂದು ಹೇಳಿದರು.

ಜಾತಿ ರಾಜಕಾರಣ ತೊಲಗಲಿ ಎಂದ ಸ್ವಾಮೀಜಿ

ʻʻಜಾತಿ ರಾಜಕಾರಣ ಎಲ್ಲ ಕಡೆಯಲ್ಲೂ ತೊಲಗಬೇಕು. ಸಂವಿಧಾನದಲ್ಲಿ ಇಂತವರೇ ಮುಖ್ಯಮಂತ್ರಿ ಆಗಬೇಕು, ಇಂಥವರು ಆಗಬಾರದು ಎಂದು ಹೇಳಿಲ್ಲ. ಹೀಗಿರುವಾಗ ನಮಗೆಲ್ಲ ಸಂವಿಧಾನ ಮುಖ್ಯವಾದದ್ದು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲ ಜನಾಂಗಕ್ಕೂ ಸರಿಯಾದ ಅವಕಾಶ ನೀಡಿದ್ದಾರೆ. ಹೀಗಾಗಿ ಬ್ರಾಹ್ಮಣರು ಮುಖ್ಯಮಂತ್ರಿಗಳಾಗಬಾರದು ಎಂಬ ಹೇಳಿಕೆಗಳು ಸಂವಿಧಾನಕ್ಕೆ ವಿರೋಧʼʼ ಎಂದು ಬ್ರಾಹ್ಮಣ ಸಿಎಂ ವಿಚಾರಕ್ಕೆ ಸಂಬಂಧಿಸಿ ಶ್ರೀಗಳು ವಿವರಣೆ ನೀಡಿದರು.

ʻʻಬ್ರಾಹ್ಮಣ ಸಮುದಾಯ ಎಲ್ಲರಿಗೂ ಕ್ಷೇಮ‌ ಕೋರುವ ಸಮುದಾಯ. ಬ್ರಾಹ್ಮಣ ಸಮುದಾಯವನ್ನು ನಿಂದಿಸುವುದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ಯಾವುದೇ ಸಮುದಾಯವನ್ನು ಯಾರೂ ಕೂಡಾ ತೆಗಳಬಾರದು. ಯಾವುದೇ ಸಮುದಾಯವನ್ನು ತೆಗಳಿದರೆ ಸಂವಿಧಾನವನ್ನು ಅಗೌರವಿಸಿದ ಹಾಗೆʼʼ ಎಂದು ಹೇಳಿದ ಅವರು, ʻಬ್ರಾಹ್ಮಣರು ಅರ್ಹರಾಗಿದ್ದು, ಸಮಾಜಮುಖಿಗಳಾಗಿದ್ದರೆ ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಇಲ್ಲʼʼ ಎಂದರು.

ಜಾತ್ಯತೀತ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಅವರು ಜಾತಿ ಜಾತಿಗಳ ನಡುವೆ ಒಡಕು ಮೂಡಿಸಿದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಪಕ್ಷಗಳು ಜಾತ್ಯತೀತ ಅನ್ನೋದಕ್ಕಿಂತ ನಮ್ಮ ದೇಶವೇ ಜಾತ್ಯತೀತ. ಇಂತಹ ದೇಶದಲ್ಲಿ ಒಂದು ಜಾತಿಯ ಬಗ್ಗೆ ನಿಂದನೆ, ಇನ್ನೊಂದು ಜಾತಿ ಬಗ್ಗೆ ವಿಶೇಷ ಹೊಗಳಿಕೆ ಸಂವಿಧಾನಕ್ಕೆ ನಾವು ಮಾಡುವ ಅಪಚಾರ ಎಂದರು.

ಪ್ರಹ್ಲಾದ್ ಜೋಶಿ ಟಾರ್ಗೆಟ್ ಮಾಡಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ʻʻವ್ಯಕ್ತಿಗತವಾಗಿ ಯಾರನ್ನೇ ಆಯ್ಕೆ ಮಾಡೋದು ಮತದಾರರು, ಪಕ್ಷಗಳು. ಮತದಾರರು ಪ್ರಹ್ಲಾದ ಜೋಶಿ ಆಗಬೇಕು ಅಥವಾ ಬೇಡ ಅಂತ ಹೇಳಿದರೆ ಆ ವಿಚಾರ ಬೇರೆ. ಯಾವುದೋ ವ್ಯಕ್ತಿಗಳು ಇಂತವರೇ ಆಗಬೇಕು, ಆಗಬಾರದು ಎಂದು ಹೇಳೋದಾದ್ರೆ ಅದು ಡೆಮಾಕ್ರಸಿ ಆಗಲ್ಲ. ಅದೊಂದು ಸರ್ವಾಧಿಕಾರ ಆಗುತ್ತದೆ. ಆ ತರಹದ ಮಾತುಗಳು ಅರ್ಥಹೀನ ಎಂದರು.

ಇದನ್ನೂ ಓದಿ : Hindu Vs Hindutva : ಹಿಂದು ಅಂದಮೇಲೆ ಹಿಂದುತ್ವ ಒಪ್ಪಲೇ ಬೇಕು: ಸಿದ್ದು ಮಾತಿಗೆ ಮಂತ್ರಾಲಯ ಶ್ರೀ ತಿರುಗೇಟು

Exit mobile version