ಬೆಳಗಾವಿ: ನಿಮ್ಮ ಬಸ್‌ಗಳು ಕರ್ನಾಟಕಕ್ಕೆ ಬರುತ್ತೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು. ಮಹಾರಾಷ್ಟ್ರದಲ್ಲಿ ಮರಾಠಿ ಮೀಸಲಾತಿ (Maratha Reservation) ಸಂಬಂಧ ಹೋರಾಟ ನಡೆಯುತ್ತಿದೆ. ನಿನ್ನೆ (ಅ.30) ಮಹಾರಾಷ್ಟ್ರದ ಉಸ್ಮನಾಬಾದ ಜಿಲ್ಲೆಯ ಉಮರಗಾ ತಾಲೂಕಿನ ತುರೋರಿ ಗ್ರಾಮದಲ್ಲಿ ಕರ್ನಾಟಕದ ಬಸ್‌ಗೆ ಉದ್ರಿಕ್ತ ಗುಂಪು ಬೆಂಕಿ ಹೆಚ್ಚಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 46 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬೆನ್ನೆಲ್ಲೆ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಕರ್ನಾಟಕ ಬಸ್‌ಗೆ ಬೆಂಕಿ ಹಾಕುವುದಕ್ಕೂ ಮಹಾರಾಷ್ಟ್ರದ ಹೋರಾಟಕ್ಕೂ ಯಾವುದೇ ಸಂಬಂಧ ಇಲ್ಲ. ನಮ್ಮ ಬಸ್‌ಗೆ ಬೆಂಕಿ ಹಾಕಿದ್ದು ಸರಿಯಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದರು. ಮಹಾರಾಷ್ಟ್ರ ಸರ್ಕಾರ ಇದನ್ನು ಖಂಡಿಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಬಸ್‌ಗಳು ನಮ್ಮ ಕರ್ನಾಟಕಕ್ಕೂ ಬರುತ್ತೆ. ಅವರ ಹೋರಾಟಕ್ಕೂ ನಮಗು ಸಂಬಂಧ ಇಲ್ಲ, ಅದು ಅವರ ಆಂತರಿಕ ವಿಚಾರವಾಗಿದೆ. ಹೋರಾಟ ಮಾಡುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: Maratha Reservation: ಮಹಾರಾಷ್ಟ್ರದಲ್ಲಿ ಕೆಕೆಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; 39 ಮಂದಿ ಪಾರು
ಬೆಂಗಳೂರಿನಿಂದ ಹೊರಡುವ ಬಸ್‌ಗಳು ಸ್ಥಗಿತ
ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ಪ್ರತಿಭಟನೆಯ ಬಿಸಿ ಗಡಿಜಿಲ್ಲೆ ಬೆಳಗಾವಿಗೂ ತಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಟಿಸಿ ನಿಗಮವು ಬೆಂಗಳೂರಿನಿಂದ ಹೊರಡುವ ಶಿರಡಿ, ಮುಂಬೈ, ಪುಣೆ ಮಾರ್ಗದ ಬಸ್‌ಗಳನ್ನು ರದ್ದುಗೊಳಿಸಿದೆ.
ಜತೆಗೆ ಇಂದಿನಿಂದ (ಅ.31) ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ನಿತ್ಯ 60ಕ್ಕೂ ಹೆಚ್ಚು ಬಸ್‌ಗಳು ಸಂಚಾರಿಸುತ್ತಿದ್ದವು. ಸದ್ಯ ಕರ್ನಾಟಕದ ಗಡಿ ಭಾಗ ನಿಪ್ಪಾಣಿವರೆಗೆ ಮಾತ್ರ ಬಸ್ ಓಡಾಟ ಇರಲಿದೆ. ಹೀಗಾಗಿ ಪ್ರಯಾಣಿಕರು ನಿಪ್ಪಾಣಿಯಿಂದ ಕಾಗಲ್ ಮಾರ್ಗವಾಗಿ ತೆರಳುತ್ತಿದ್ದಾರೆ.
ಗಡಿ ಭಾಗ ಚಿಕ್ಕೋಡಿ ಉಪವಿಭಾಗದಿಂದ ಮಹಾರಾಷ್ಟಕ್ಕೆ ಹೋಗುವ ಎಲ್ಲ ಬಸ್ ಸೇವೆಯನ್ನು ತಾತ್ಕಾಲಿಕ ರದ್ದುಗೊಳಿಸಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಬಸ್ ನಿಲ್ದಾಣವೇ ಕೊನೆಯ ನಿಲ್ದಾಣವಾಗಲಿದೆ. ಕೊಲ್ಲಾಪುರ, ಪುಣೆ, ಮುಂಬೈ, ಸಾಂಗ್ಲಿ, ಮೀರಜ್ ಗೆ ಬಸ್ ಸೇವೆ ರದ್ದಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮರಾಠ ಕಿಚ್ಚು; ಶಾಸಕರ ಮನೆಗೆ ಬೆಂಕಿ, ಶಿಂಧೆ ಬಣದ ಇಬ್ಬರು ಸಂಸದರ ರಾಜೀನಾಮೆ!
ಕೊಲ್ಹಾಪುರಕ್ಕೆ ತೆರಳುವ ಬಸ್‌ಗಳು ನಿಪ್ಪಾಣಿವರೆಗೆ ಹಾಗೂ ಮಿರಜ್‌ನತ್ತ ತೆರಳುವ ಬಸ್‌ಗಳು ಕಾಗವಾಡವರೆಗೆ ಮಾತ್ರ ಸಂಚಾರ ಸಂಚಾರಿಸಲಿದೆ. ಇಚಲಕರಂಜಿಗೆ ತೆರಳುವ ಬಸ್‌ಗಳು ಬೋರಗಾಂವವರೆಗೆ ಓಡಾಡಲಿದೆ. ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಚಿಕ್ಕೋಡಿಯಲ್ಲಿ NWKRTC ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ಮಾಹಿತಿ ನೀಡಿದ್ದಾರೆ.
ಕೊಲ್ಗಾಪುರ ಮಾರ್ಗದ 150 ಟ್ರಿಪ್, ಮಿರಜ್ ಮಾರ್ಗದತ್ತ ತೆರಳುವ 210 ಟ್ರಿಪ್ ಬಸ್‌ಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಹಾರಾಷ್ಟ್ರಕ್ಕೆ ಹೋಗಿದ್ದ ಕೆಲವು ಬಸ್‌ಗಳು ವಾಪಸ್ ಬಂದಿವೆ. ಇನ್ನು ಕೆಲವು ಬಸ್‌ಗಳನ್ನು ಅಲ್ಲಿಯೇ ಸಮೀಪದ ಡಿಪೋಗಳಲ್ಲಿ ನಿಲ್ಲಿಸಲು ಸೂಚಿಸಿದ್ದೇವೆ ಎಂದರು.
ಬಸ್‌ಗೆ ಕಲ್ಲೆಸೆತೆ, ಪ್ರಯಾಣಿಕರಿಗೆ ಗಾಯ
ಮಹಾರಾಷ್ಟ್ರದ ಜತ್ತ ಪಟ್ಟಣದಿಂದ ವಿಜಯಪುರಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕೆಲ ಪ್ರಯಾಣಿಕರಿಗೆ ಗಾಯವಾಗಿದೆ. ವಿಜಯಪುರ ತಾಲೂಕಿನ ಇಂಡಿ ಘಟಕಕ್ಕೆ ಸೇರಿದ ಬಸ್ ಇದಾಗಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಠಾತ್ ಕಲ್ಲು ತೂರಾಟ ಮಾಡಿದ್ದಾರೆ. ಕಲ್ಲು ತೂರಾಟದಿಂದ ಹಿಂಬದಿ ಗ್ಲಾಸ್ ಪುಡಿ ಪುಡಿ ಆಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ