ಬಳ್ಳಾರಿ: ಮೈಸೂರಿನ ಕೊಳ್ಳೇಗಾಲ-ಟಿ.ನರಸಿಪುರ ಹೆದ್ದಾರಿಯ ಕುರುಬೂರು ಬಳಿ ನಡೆದ ಭೀಕರ ಅಪಘಾತ (Mysore Road Accident)ದಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರಾದ ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಏಕಕಾಲಕ್ಕೆ ನಡೆದಿದೆ. ಈ ದುರಂತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇಂದು ಸಂಗನಕಲ್ಲು ಗ್ರಾಮದಲ್ಲಿ ಎಲ್ಲರನ್ನೂ ಹೂಳುವ ಮೂಲಕ ಅಂತ್ಯಕ್ರಿಯೆ ಮಾಡಲಾಗಿದೆ.
ಇಂದು ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಂಗನಕಲ್ಲು ಗ್ರಾಮಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು ಭೇಟಿ ಕೊಟ್ಟಿದ್ದರು. ಮೃತರ ಕುಟುಂಬಸ್ಥರಿಗೆ-ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಶ್ರೀರಾಮುಲು ‘ಸಂಗನಕಲ್ಲು ಗ್ರಾಮದಿಂದ 12 ಜನರು ಮೈಸೂರಿಗೆ ಪ್ರವಾಸಕ್ಕೆ ಹೋಗಿದ್ದರು. ಬಳ್ಳಾರಿಯಿಂದ ರೈಲಿನಲ್ಲಿ ತೆರಳಿ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಮಲೆಮಹದೇಶ್ವರ ದೇವಸ್ಥಾನಕ್ಕೆ ಹೋಗಿದ್ದರು. ದೇಗುಲದಿಂದ ವಾಪಸ್ ಬರುವಾಗ ಅಪಘಾತವಾಗಿದೆ. ಈ ಬಗ್ಗೆ ಸ್ಥಳೀಯರೇ ನನಗೆ ಫೋನ್ ಮಾಡಿ ತಿಳಿಸಿದ್ದರು. ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಕೊಡಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದ್ದೆ’ ಎಂದು ಹೇಳಿದರು.
ಹಾಗೇ, ‘ರಾಜ್ಯ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಆದರೆ ಮಾನವೀಯತೆ ದೃಷ್ಟಿಯಿಂದ ತಲಾ 5 ಲಕ್ಷ ರೂ.ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. ಹಾಗೇ, ಕುಟುಂಬದಲ್ಲಿ ಇರುವ ಇತರರು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಬೇಕು ಎಂದೂ ಹೇಳಿದರು. ಇನ್ನು ಅಂತ್ಯ ಸಂಸ್ಕಾರ ನಡೆಯುತ್ತಿದ್ದ ಜಾಗಕ್ಕೆ ಬಳ್ಳಾರಿ ಡಿಸಿ ಪವನ್ ಕುಮಾರ್ ಮಾಲಪಾಟಿ ಕೂಡ ಭೇಟಿ ಮಾಡಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ಸೂತಕದ ಜಾತ್ರೆ
ಮೈಸೂರಿನ ಬಳಿ ಖಾಸಗಿ ಬಸ್ ಮತ್ತು ಬಾಡಿಗೆ ಕಾರಿನ ನಡುವೆ ಡಿಕ್ಕಿಯಾಗಿ ಈ ದುರಂತ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನೆಲ್ಲ ಇಂದು ಮೈಸೂರಿನಿಂದ ಬಳ್ಳಾರಿಯ ಸಂಗನಕಲ್ಲು ಗ್ರಾಮಕ್ಕೆ ಆಂಬ್ಯುಲೆನ್ಸ್ಗಳಲ್ಲಿ ತರಲಾಯಿತು. ಒಂದರ ಬೆನ್ನಿಗೆ ಒಂದರಂತೆ ಆಂಬ್ಯುಲೆನ್ಸ್ಗಳು ಹಳ್ಳಿಗೆ ಬಂದು ನಿಂತವು. ಜನರ ಜಾತ್ರೆಯೇ ಅಲ್ಲಿತ್ತು. ಆದರೆ ಸೂತಕ ತುಂಬಿ ಹೋಗಿತ್ತು. ನೂರಾರು ಜನರು ಅಲ್ಲಿಗೆ ಆಗಮಿಸಿದ್ದರು. ಶವಗಳನ್ನು ಆಂಬ್ಯುಲೆನ್ಸ್ಗಳಿಂದ ಇಳಿಸಿ, ಅಂತ್ಯಕ್ರಿಯೆ ಮಾಡುವ ಹೊತ್ತಿಗೆ ಕುಟುಂಬಸ್ಥರು, ಬಂಧುಗಳು ಗೋಳಿಡುತ್ತಿದ್ದರು.
ಇದನ್ನೂ ಓದಿ: Video : ಬೆಚ್ಚಿ ಬೀಳಿಸುತ್ತದೆ ಮೈಸೂರಿನ ಭೀಕರ ಅಪಘಾತದ ಸಿಸಿಟಿವಿ ದೃಶ್ಯ
ಮೃತರು ಯಾರ್ಯಾರು?
ನಿನ್ನೆಯ ಅಪಘಾತದಲ್ಲಿ ಮೃತಪಟ್ಟವರು ಒಂದೇ ಕುಟುಂಬದವರು/ಪರಸ್ಪರ ಬಂಧುಗಳು. ಜನಾರ್ದನ್, 4ವರ್ಷದ ಮಗು ಪುನೀತ್ ಮತ್ತು ಶಶಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂದೀಪ್ (23), ಇವರ ತಂದೆ ಕೊಟ್ರೇಶ್ (45), ತಾಯಿ ಸುಜಾತಾ (35), ಮಂಜುನಾಥ್ (40), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತೀಕ್ (11), ಪವನ್ (7), ಗಾಯತ್ರಿ (30) ಮತ್ತು ಇವರ ಮಗಳು ಶ್ರಾವ್ಯಾ (3) ಮೃತರು. ಚಾಲಕನ ಹೆಸರು ಗೊತ್ತಾಗಿಲ್ಲ.