ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ(ಸಿದ್ದಾಪುರ): ಬ್ರಿಟಿಷರ (British) ದಾಸ್ಯದ ಸಂಕೋಲೆಯಿಂದ ಭಾರತೀಯರ (Indians) ವಿಮೋಚನೆಗಾಗಿ ಹೋರಾಡಿದ ಅನೇಕ ವೀರರನ್ನು ಕೊಡುಗೆ ನೀಡಿದ ಹೆಮ್ಮೆಯ ನಾಡು ಕರ್ನಾಟಕ (Karnataka). ಈ ನಾಡಿನಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಕೊಡುಗೆಗಳನ್ನು ತಮ್ಮದೇ ಆದ ಶೈಲಿಯಲ್ಲಿ ನೀಡಿರುವುದು ಗಮನಿಸಬೇಕಾದ ಅಂಶ. ಈ ದಿಸೆಯಲ್ಲಿ ನಡೆದು ಬಂದ ಹೋರಾಟದ ಹಾದಿಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಸಮೀಪದ ಮಾವಿನಗುಂಡಿಯ (Mavigundi) ಮಹಿಳಾ ಸತ್ಯಾಗ್ರಹ ವಿಶಿಷ್ಟವಾದದ್ದು.
ಹೌದು…..ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಿಂದ 16 ಕಿ.ಲೋ ಮೀಟರ್ ದೂರವಿರುವ ಮಾವಿನಗುಂಡಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿಕೊಂಡಿರುವ ಗಡಿಭಾಗವಾಗಿದೆ. ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದಾರಿಹೋಕರನ್ನು ತನ್ನತ್ತ ಸೆಳೆಯುತ್ತಾ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ತಿಳಿಸುವ ಪ್ರಾಚೀನ ಮಾದರಿಯ ಭವನವೇ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸುವರ್ಣ ಪುಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರ ನಿರಾಕರಣೆ ಸತ್ಯಾಗ್ರಹ ರೋಮಾಂಚನಕಾರಿ. ಅದರಲ್ಲಿ ಮಾವಿನಗುಂಡಿಯ ಮಹಿಳೆಯರ ಉಪವಾಸ ಸತ್ಯಾಗ್ರಹ ಅವರ ದೇಶ ಭಕ್ತಿ, ಛಲ, ಸಂಕಲ್ಪ, ಸಹನೆ, ತ್ಯಾಗ ಹಾಗೂ ಧೈರ್ಯಗಳಿಗೆ ನಿದರ್ಶನವಾಗಿದೆ. 1932ರ ಮೇ 18ರಂದು ಕರ ನೀಡದ ರೈತರ ಎಮ್ಮೆಗಳನ್ನು ಬ್ರಿಟಿಷರು ಬಲಾತ್ಕಾರವಾಗಿ ವಶಪಡೆದುಕೊಂಡು ದಬ್ಬಾಳಿಕೆ ನಡೆಸಿದಾಗ, ಅವುಗಳನ್ನು ಮರಳಿ ಪಡೆಯಲು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
ಇದನ್ನೂ ಓದಿ: Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು
ಈ ಸತ್ಯಾಗ್ರಹದಲ್ಲಿ ಬಾಣಂತಿಯರು, ಹೆಣ್ಣುಮಕ್ಕಳು, ವಯಸ್ಕರು ಜತೆಗೂಡಿ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದರು. ಇವರಲ್ಲಿ ಪ್ರಮುಖವಾಗಿ ತ್ಯಾಗಲಿ ಭುವನೇಶ್ವರಮ್ಮ 32 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕುಳಿತರೆ, ಕಲ್ಲಾಳ ಲಕ್ಷ್ಮಮ್ಮ 22 ದಿನ ಕಾಲ ಉಪವಾಸ ಸತ್ಯಾಗ್ರಹ ಕುಳಿತು ಹೋರಾಟಕ್ಕೆ ಸ್ಫೂರ್ತಿಯಾದರು. ಅವರೊಂದಿಗೆ ದೊಡ್ಮನೆ ಮಹಾದೇವಮ್ಮ, ಕುಳಿಬೀಡು ಗಣಪಮ್ಮ, ಪಣಜಿ ಬೈಲು ದುಗ್ಗಮ್ಮ, ಕುಳಿಬೀಡು ಭಾಗೀರಥಮ್ಮ, ಕಲ್ಲಾಳ ಕಾವೇರಮ್ಮ, ಹೊಸಕೊಪ್ಪ ಸೀತಮ್ಮ, ಗುಂಜಗೋಡ ಮಹದೇವಮ್ಮ, ಹೆಗ್ಗಾರ ದೇವಮ್ಮ ಪ್ರಮುಖರು. ಮಹಾತ್ಮ ಗಾಂಧೀಜಿ ಅವರ ಸತ್ಯಾಗ್ರಹದಿಂದ ಪ್ರೇರಿತರಾದ ಈ ಗ್ರಾಮೀಣ ಮಹಿಳೆಯರು ತಮ್ಮದೇ ಆದ ಶೈಲಿಯಲ್ಲಿ ಬ್ರಿಟಿಷರ ವಿರುದ್ಧ ಸಟೆದು ನಿಂತಿದ್ದರು. ಕರ ನಿರಾಕರಣೆ ಸತ್ಯಾಗ್ರಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು ಗಮನಾರ್ಹ ವಿಚಾರ.
ಇಂತಹ ಮಹತ್ವಪೂರ್ಣ ಹೋರಾಟ ಜನಮಾನಸದ ನೆನಪಿನ ಅಂಗಳದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ನಿರ್ಮಿಸಿರುವ ಯೋಜನೆಯೇ ಮಹಿಳಾ ಸತ್ಯಾಗ್ರಹ ಸ್ಮಾರಕ ಭವನ. ಇಲ್ಲಿನ ಸ್ಮಾರಕ ಭವನದಲ್ಲಿ ಮಹಿಳೆಯರು ಸತ್ಯಾಗ್ರಹ ಕುಳಿತ ಮಾದರಿಯ ಆಕೃತಿಗಳನ್ನು ನಿಪುಣ ಕಲಾಕಾರರ ಸಹಾಯದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ.
ಇದನ್ನೂ ಓದಿ: Mobile Addiction : ಮಕ್ಕಳಿಗಿನ್ನು ಮೊಬೈಲ್ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!
ಮಹಿಳೆಯರನ್ನು ಕೋಳ ತೊಡಿಸಿ ಬ್ರಿಟೀಷ್ ಸೈನಿಕರು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು, ಪ್ರಮುಖ ಮಹಿಳಾ ಹೋರಾಟಗಾರರನ್ನು ಬಂದೀಖಾನೆಯಲ್ಲಿ ಬಂಧಿಸಿಟ್ಟಿರುವ ರೀತಿಯ ಕಲಾಕೃತಿಗಳು, ಜೀವಂತ ಆಕೃತಿಗಳ ರೀತಿಯಲ್ಲಿ ನೋಡುಗರಿಗೆ ಭಾಸವಾಗುತ್ತದೆ. ಇವಕ್ಕೆ ಪೂರಕವಾಗಿ ಬೆಟ್ಟದ ಮೇಲಿನಿಂದ ಹರಿದು ಬರುವ ಸುಂದರ ಝರಿಗಳು, ಕೃತಕ ಬೆಟ್ಟ ಗುಡ್ಡಗಳು, ಆಕರ್ಷಕವಾದ ಹೂದೋಟ, ಕೋಟೆ ಮಾದರಿಯ ಕಾಂಪೌಂಡ್ ನಿಸರ್ಗದ ಮಡಿಲಿನಲ್ಲಿ ಲೀನವಾಗುವ ರೀತಿಯಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಹೀಗೆ ಪ್ರತಿಯೊಂದು ಕಡೆ ನಡೆಸಿದ ಸತ್ಯಾಗ್ರಹವೂ ಈ ವೀರ ಮಹಿಳೆಯರ ತಾಳ್ಮೆಯನ್ನೂ, ಧೈರ್ಯವನ್ನೂ ಹಾಗೂ ಕಷ್ಟ ಸಹಿಷ್ಣುತೆಗಳನ್ನೂ ಒರೆಗಲ್ಲಿಗೆ ಹಚ್ಚುವ ಪರೀಕ್ಷೆಯಾದುದು. ಆದರೆ, ಎಂತಹ ಭೀಕರ ವಾತಾವರಣ ನಿರ್ಮಾಣವಾದರೂ ಸೋಲನ್ನೊಪ್ಪಿಕೊಳ್ಳದೇ ಅದೇ ಪಥದಲ್ಲಿ ಮುಂದುವರಿದುದು ಹಾಗೂ ಪ್ರತಿಯೊಂದು ಸತ್ಯಾಗ್ರಹವನ್ನೂ ಯಶಸ್ವಯಾಗಿಯೇ ಮುಗಿಸಿದ್ದು ಅವರ ಹಿರಿಮೆಗೆ ಹಿಡಿದ ಕೈಗನ್ನಡಿ.
ಆದರೆ ಇದನ್ನು ಕಾಪಾಡಿಕೊಳ್ಳೋದು ಎಲ್ಲಾ ದೇಶಪ್ರೇಮಿಗಳ ಕರ್ತವ್ಯ. ಅಲ್ಲದೆ ಇಲ್ಲಿರೋ ಮೂರ್ತಿಗಳನ್ನು ಕೆಲ ಪ್ರವಾಸಿಗರು ಹಾಳು ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಸುರಕ್ಷಿತ ಪ್ರದೇಶದಲ್ಲಿ ನಿರ್ಮಾಣವಾಗಿದ್ದರೂ ಇದಕ್ಕೆ ಸೂಕ್ತ ಭದ್ರತೆ ಇಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಪ್ರದೇಶ6ವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ ಎಂಬುದು ಸಾರ್ವಜನಿಕರ ಆಶಯ.
ಇದನ್ನೂ ಓದಿ: Match Fixing : ಶ್ರೀಲಂಕಾದ ಮಾಜಿ ಕ್ರಿಕೆಟಿಗನಿಗೆ ಪ್ರಯಾಣ ನಿಷೇಧ
77ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಈ ಬಗ್ಗೆ ಉಪಯುಕ್ತ ಮಾಹಿತಿ ದೊರಕುವ ಕೆಲಸವಾಗಬೇಕಿದೆ. ಗತಕಾಲದ ಇತಿಹಾಸವನ್ನು ನೆನಪಿಸೋ ಇಂತಹ ಸ್ಮಾರಕಗಳನ್ನು ಉಳಿಸಿಕೊಳ್ಳೋದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.