Site icon Vistara News

Media Awards : ಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ; ನೈಟ್ ವಾಚ್‌ಮನ್ ಕೂಡ ಹೌದು ಎಂದ ಸಿಎಂ ಬೊಮ್ಮಾಯಿ

congress says cm basavraj bommai will not get chance to contest inkarnataka election

#image_title

ಬೆಂಗಳೂರು: ʻʻಪತ್ರಿಕೋದ್ಯಮ ವಾಚ್ ಡಾಗ್ ಅಷ್ಟೇ ಅಲ್ಲ. ನೈಟ್ ವಾಚ್‌ಮನ್‌ ಕೂಡ ಹೌದು. ಆ ರೀತಿಯ ಕೆಲಸವನ್ನು ನೀವು ಮಾಡಿದ್ದೀರಿ. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಅವರು ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಇಲಾಖೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮಾಧ್ಯಮ ವಾರ್ಷಿಕ ಮತ್ತು ದತ್ತಿ ಪ್ರಶಸ್ತಿ ಪ್ರದಾನ (Media Awards) ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ʻʻಪ್ರಶಸ್ತಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರೇಪಿಸಲಿ ಎನ್ನುವುದು ನನ್ನ ಆಶಯ. ನೀವು ಒಳ್ಳೆಯ ಕೆಲಸ ಮಾಡಿದ್ದಕ್ಕಾಗಿ ಗುರುತಿಸಿದ್ದಾರೆ. ನೀವು ನಿಮ್ಮ ವೃತ್ತಿಧರ್ಮವನ್ನು ಇನ್ನಷ್ಟು ಗಟ್ಟಿಯಾಗಿ ಪ್ರತಿಪಾದಿಸಿದಾಗ ಪ್ರಶಸ್ತಿಯ ಗೌರವ ಮತ್ತು ಪಾವಿತ್ರ್ಯತೆ ಹೆಚ್ಚುತ್ತದೆʼʼ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ʻʻಪತ್ರಿಕೋದ್ಯಮ ಬಹಳ ಹಳೆಯ ವೃತ್ತಿ. ವಿಶ್ವದ ನಾಗರಿಕತೆಯ ಬೆಳವಣಿಗೆಯಲ್ಲಿ ಇದಕ್ಕೆ ಬಹಳ ದೊಡ್ಡ ಪಾತ್ರವಿದೆ. ತಂತ್ರಜ್ಞಾನ ವರ್ಧಿಸಿದಂತೆ ಪತ್ರಿಕೋದ್ಯಮದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅದರಲ್ಲೂ ಮೊದಲ ಮತ್ತು ಎರಡನೇ ಮಹಾಯುದ್ಧದ ಬಳಿಕ ಯಂತ್ರಗಳ ಉತ್ಪಾದನೆ ಮತ್ತು ಪತ್ರಿಕೋದ್ಯಮದಲ್ಲಿ ಬಹಳ ಬದಲಾವಣೆ ಆಗಿದೆʼʼ ಎಂದ ಮುಖ್ಯಮಂತ್ರಿಗಳು, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಪತ್ರಿಕೋದ್ಯಮ ಪಾತ್ರ ತುಂಬಾ ದೊಡ್ಡದಿತ್ತು ಎಂದು ಸ್ಮರಿಸಿದರು.

ʻʻಧಾರವಾಡ, ರಾಯಚೂರು, ಮೈಸೂರಿನಲ್ಲಿ ಪತ್ರಕರ್ತರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎನ್ನುವುದು ನನಗೆ ಗೊತ್ತುʼʼ ಎಂದು ಹೇಳಿದ ಅವರು, ಮಾಧ್ಯಮ ಅಕಾಡೆಮಿ ಕೇವಲ ಪ್ರಶಸ್ತಿ ಕೊಡುವ ಕೆಲಸ ಮಾಡದೆ, ಸಂಶೋಧನೆ, ಹೊಸ ಪತ್ರಕರ್ತರಿಗೆ ಪ್ರೋತ್ಸಾಹ, ತಾಲ್ಲೂಕು, ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಹೆಚ್ಚಿನ ಬೆಂಬಲ ನೀಡಬೇಕುʼʼ ಎಂದರು.

ಪತ್ರಿಕೋದ್ಯಮ ಹಾಗೂ ರಾಜಕಾರಣಿಗಳ ಸಂಬಂಧ ಅವಿನಾಭಾವ ಸಂಬಂಧ. ರಾಜಕೀಯ ಇಲ್ಲದೆ ಪತ್ರಿಕೆಗಳು ನಡೆಯುವುದಿಲ್ಲ. ಪತ್ರಿಕೆಗಳಿಲ್ಲದೇ ರಾಜಕಾರಣಿಗಳಿಲ್ಲ. ಪತ್ರಿಕೆಗಳು ಸಕಾರಾತ್ಮಕ ಸುದ್ದಿಗಳಿಗೆ ಆದ್ಯತೆ ನೀಡಿ, ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಚಿವ ಆರ್. ಅಶೋಕ, ಉದ್ಯಮಿ ವಿಜಯ ಸಂಕೇಶ್ವರ್, ಡಾ. ಸುಧಾಮೂರ್ತಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : Media Awards : ವಿಸ್ತಾರ ನ್ಯೂಸ್‌ನ ಹರಿಪ್ರಕಾಶ್‌ ಕೋಣೆಮನೆ, ರಾಮಸ್ವಾಮಿ ಹುಲಕೋಡು ಸಹಿತ 150ಕ್ಕೂ ಅಧಿಕ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Exit mobile version