ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 6 ಪತ್ರಕರ್ತರಿಗೆ ವಿಶ್ವ ಮಾಧ್ಯಮ ಸಂವಾದ ಕೇಂದ್ರದ ವತಿಯಿಂದ ನಗರದ ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ, ವಿಎಸ್‌ಕೆ ಮಾಧ್ಯಮ ಪ್ರಶಸ್ತಿ-2023 ಪ್ರದಾನ (Media Awards) ಮಾಡಲಾಯಿತು.
ಈ ಬಾರಿ ತಿ.ತಾ.ಶರ್ಮಾ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪ್ರಜಾವಾಣಿಯ ರವಿಪ್ರಕಾಶ್. ಎಸ್, ಸುವರ್ಣ ವಾಹಿನಿಯ ಜಯಪ್ರಕಾಶ್ ಶೆಟ್ಟಿ, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಶಿವಮೊಗ್ಗದ ಅಜೇಯ ಪತ್ರಿಕೆಯ ಸಂಪಾದಕ ಎಂ. ಶ್ರೀನಿವಾಸನ್, ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಯನ್ನು ಹೊಸದಿಗಂತದ ಅಂಕಣಕಾರ ಹೆಬ್ರಿ ಬಾಲಕೃಷ್ಣ ಮಲ್ಯ, ವಿಕ್ರಮ ವಾರಪತ್ರಿಕೆಯ ಅಂಕಣಕಾರ ಕಾ. ರಮಾನಂದ ಆಚಾರ್ಯ, ವಿ.ಎಸ್.ಕೆ. ಡಿಜಿಟಲ್ ಮಾಧ್ಯಮ ಪ್ರಶಸ್ತಿಯನ್ನು ಮೀಡಿಯಾ ಮಾಸ್ಟರ್ಸ್ ಸಂಪಾದಕ ಎಂ. ಎಸ್. ರಾಘವೇಂದ್ರ ಸ್ವೀಕರಿಸಿದರು.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಟಾಪ್ 25ರ ಗೌರವ ಪಡೆದ ಕಥೆ: ಪರಸೆ
ನಂತರ ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶ್ರೀನಿವಾಸ ಬಳ್ಳಿ ಅವರು ಮಾತನಾಡಿ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮವು, ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ಮೂಡಿಸುವ ಅಸ್ತ್ರವಾಗಬೇಕಿತ್ತು. ಆದರೆ, ಪ್ರಸ್ತುತ ಅದು ಧಾವಂತದಿಂದಾಗಿ ಅನೇಕ ವೈಪರಿತ್ಯಕ್ಕೆ ಎಡೆ ಮಾಡಿಕೊಡುತ್ತಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಆದರ್ಶ ಪ್ರಧಾನವಾಗಿ, ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪ್ರಶಸ್ತಿಗಾಗಿಯೋ, ಪ್ರಶಂಸೆಗಾಗಿಯೋ ಕೆಲಸ ಮಾಡುವುದಕ್ಕಿಂತ, ಒಳ್ಳೆಯ ಉದ್ದೇಶಕ್ಕಾಗಿ ಕಾರ್ಯನಿರ್ವಹಿಸುವುದನ್ನು ತನ್ನ ಧ್ಯೇಯವೆಂದು ಭಾವಿಸಿ ಕಾರ್ಯನಿರ್ವಹಿಸುವವರಿಂದ ಸಮಾಜ ಕಟ್ಟುವ ಕೆಲಸವಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಉಳಿಯಬೇಕಾಗಿರುವುದು ಮೌಲ್ಯವೇ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ: ಕ್ರಿಕೆಟ್‌ನಲ್ಲಿ ಮೊದಲ ವಿಶ್ವಕಪ್ ಗೆದ್ದ ಐತಿಹಾಸಿಕ ಘಟನೆಗೆ 40 ವರ್ಷ!
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ವಿಶ್ವ ಸಂವಾದ ಕೇಂದ್ರದ ಅಧ್ಯಕ್ಷ ಡಾ.ಶ್ರೀಧರ್ ಉಪಸ್ಥಿತರಿದ್ದರು. ಚಿಂತಕರು, ಅಂಕಣಕಾರರು, ಲೇಖಕರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.