ಬೆಂಗಳೂರು: ಮೂಲ ವೇತನದ ಪರಿಷ್ಕರಣೆ, ಭತ್ಯೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಕರೆದಿದ್ದ ನಾಲ್ಕು ನಿಗಮಗಳ ಎಂಡಿಗಳು ಹಾಗೂ ಸಾರಿಗೆ ನೌಕಕರ ಸಂಘದ ಸಭೆ ವಿಫಲವಾಗಿದೆ. ಶೇ.14 ವೇತನ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಒಪ್ಪಿಗೆ ನೀಡಿದ್ದು, ಆದರೆ ನೌಕರರು ಶೇ.20 ಹೆಚ್ಚಳ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶೇ.25 ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಾ. 21 ಮತ್ತು ಮಾ. 24ರಿಂದ ಸಾರಿಗೆ ನೌಕರರ ಎರಡು ಪ್ರತ್ಯೇಕ ಬಣಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೀಗಾಗಿ ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರ ಮಹಾಮಂಡಳಿ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಶೇ.14 ವೇತನ ಹೆಚ್ಚಳಕ್ಕೆ ಸಾರಿಗೆ ಇಲಾಖೆ ಒಪ್ಪಿದೆ. ಆದರೆ, ಸಂಘ ಶೇ.20 ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದು, ಬೇಡಿಕೆ ಈಡೇರಿಸದಿದ್ದರೆ ಮುಷ್ಕರ ಖಚಿತ ಎಂದು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ | KSRTC Employees Strike: ಕೆಪಿಟಿಸಿಎಲ್ ಬಳಿಕ ಸಾರಿಗೆ ನೌಕರರ ವೇತನವೂ ಹೆಚ್ಚಳ ಸಾಧ್ಯತೆ; ಬಸ್ ಸೇವೆ ಅಬಾಧಿತ?
ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆ ಅಧ್ಯಕ್ಷ ಅನಂತ ಸುಬ್ಬರಾವ್ ಮಾತನಾಡಿ, ವಿಧಾನಸಭೆಯಲ್ಲಿ ಶ್ರೀರಾಮುಲು ಜತೆ ಮೀಟಿಂಗ್ ಆದಾಗ ಶೇ.10 ವೇತನ ಹೆಚ್ಚಳ ಆಫರ್ ನೀಡಿದ್ದರು. ನಾವು ಕನಿಷ್ಠ ಶೇ. 20 ಹೆಚ್ಚಳ ಮಾಡಿ ಎಂದು ಕೇಳಿದ್ದೇವೆ. ಆದರೆ ಈಗ ಶೇ. 14ಕ್ಕೆ ಒಪ್ಪಿಕೊಳ್ಳಿ ಎಂದಿದ್ದಾರೆ. ಆದರೆ ನಾವು ಇದಕ್ಕೆ ಒಪ್ಪಿಕೊಂಡಿಲ್ಲ. ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿ ನಂತರ ಮುಷ್ಕರದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನಿಗಮಗಳ ಎಂಡಿಗಳು ಈಗ ಸಿಎಂ ಭೇಟಿಗೆ ಹೋಗಿದ್ದಾರೆ. ಸಿಎಂ ಅಂಗಳದಲ್ಲಿ ನಮ್ಮ ಬೇಡಿಕೆ ಇದೆ. 21 ರಂದು ಬಂದ್ ಆಗಬೇಕೋ ಬೇಡವೋ ಎಂದು ಸಿಎಂ ನಿರ್ಧರಿಸಲಿ. ನಾವು ಶೇ.14 ಏರಿಕೆಗೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.