Site icon Vistara News

Mega Job Fair: ಬೆಂಗಳೂರಲ್ಲಿ ಜನವರಿ ಅಂತ್ಯಕ್ಕೆ ಬೃಹತ್ ಉದ್ಯೋಗ ಮೇಳ: ಡಿಕೆಶಿ

Job fair

ಬೆಂಗಳೂರು: ನಗರದಲ್ಲಿ ಜನವರಿ ತಿಂಗಳಾಂತ್ಯಕ್ಕೆ ಕನ್ನಡಿಗರಿಗಾಗಿ ಬೃಹತ್ ಉದ್ಯೋಗ ಮೇಳ (Mega Job Fair) ಆಯೋಜಿಸಲು ಸರ್ಕಾರ ನಿರ್ಧರಿಸಿದೆ. ನಂತರದ ದಿನಗಳಲ್ಲಿ ಪ್ರತಿ ಜಿಲ್ಲಾ ಮತ್ತು ವಲಯವಾರು ಉದ್ಯೋಗ ಮೇಳ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಉದ್ಯೋಗ ಮೇಳ ಕುರಿತ ಸಭೆಯ ನಂತರ ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರ್ಕಾರದಿಂದಲೇ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ಸಭೆಯಲ್ಲಿ ನಡೆಸಲಾಯಿತು ಎಂದು ಹೇಳಿದರು.

ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ನಮ್ಮ ಕನ್ನಡಿಗರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ದೊರಕುವಂತಾಗಬೇಕು. ಐಟಿ- ಬಿಟಿ, ಹೋಟೆಲ್, ಉತ್ಪಾದನಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಕ- ಯುವತಿಯರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು. ಆದ ಕಾರಣ ಕೌಶಲ್ಯ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎನ್ನುವ ಸಲಹೆ ಸಭೆಯಲ್ಲಿ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ರೂಪುರೇಷೆಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ | ಅಲ್ಪಸಂಖ್ಯಾತರ ಕಾಲೋನಿಗೆ ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಕೈಗಾರಿಕಾ ಕ್ಷೇತ್ರ ಸೇರಿದಂತೆ ಇತರೇ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಣ್ಣ ಮತ್ತು ಮಧ್ಯಮ, ಬೃಹತ್ ಕೈಗಾರಿಕಾ, ಯುವಜನ, ಉನ್ನತ ಶಿಕ್ಷಣ, ಕಾರ್ಮಿಕ, ಐಟಿ-ಬಿಟಿ ಸಚಿವರು ಮತ್ತಿತರರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಕೈಗಾರಿಕೆಗಳಿಗೆ ಅನುಗುಣವಾಗಿ ಉದ್ಯೋಗದಾತರನ್ನು ಸೃಷ್ಟಿಸಬೇಕು ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರ ಮತ್ತು ಸಚಿವರ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿದೆ. ಈ ಸಮಿತಿಯು ಉದ್ದಿಮೆದಾರರ ಬಳಿ ಚರ್ಚೆ ನಡೆಸುತ್ತದೆ. ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಹೊಸ ರೂಪುರೇಷೆ ಹೊಂದಿರುವ ಬೃಹತ್ ಉದ್ಯೋಗ ಮೇಳ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಯುವ ಸಮುದಾಯಕ್ಕೆ ಉದ್ಯೋಗ ನೀಡಲು ವಿಫಲವಾಗಿದೆ. ಈ ವಿಚಾರವಾಗಿ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ದನಿ ಎತ್ತಿದ್ದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಯುವನಿಧಿ ಕಾರ್ಯಕ್ರಮ ಜಾರಿಗೆ ತಂದಿದೆ. ಜ.12 ರಂದು ಶಿವಮೊಗ್ಗದಲ್ಲಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ಜನವರಿ ಕೊನೆಯ ವಾರದಲ್ಲಿ ಉದ್ಯೋಗ ಮೇಳ: ಸಿದ್ಧತೆಗೆ ಸಚಿವರ ತಂಡ ರಚನೆ: ಸಿಎಂ

ಬೆಂಗಳೂರು: ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿ ಆಯೋಜಿಸಲೂ ಸಚಿವರ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸುವ ಕುರಿತು ಅವರು ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದರು. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌, ಯುವ ಸಬಲೀಕರಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನೊಳಗೊಂಡ ಸಚಿವರ ತಂಡ ರಚಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಚಿವರ ಈ ತಂಡವು ಉದ್ಯೋಗದಾತರೊಂದಿಗೆ ಸಭೆ ನಡೆಸಿ ಈ ಕುರಿತು ಚರ್ಚಿಸಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು. ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಉದ್ಯೋಗ ಮೇಳ ಆಯೋಜಿಸಲಾಗುವುದು. ಕೈಗಾರಿಕೆಗಳೊಂದಿಗೆ ಚರ್ಚಿಸಿ, ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹಾಗೂ ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆಯೂ ಶಿಫಾರಸುಗಳನ್ನು ಮಾಡುವಂತೆ ಸಚಿವರ ತಂಡಕ್ಕೆ ಸೂಚಿಸಿದರು.

ಇದನ್ನೂ ಓದಿ | Guest Lecturer: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ವಿಮೆ ಘೋಷಣೆ

ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಕುರಿತೂ ಸಹ ಪರಿಶೀಲಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಇದಲ್ಲದೆ ರಾಜ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಉದ್ಯೋಗ ನೀತಿಯನ್ನು ಹೊಂದುವ ಅಗತ್ಯವಿದೆ. ಈ ನೀತಿಯನ್ನು ರೂಪಿಸಲು ಸಿದ್ಧತೆ ನಡೆಸುವಂತೆ ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version