ಬೆಂಗಳೂರು: ಮಾಜಿ ದೇವದಾಸಿಯರ ಮಕ್ಕಳು (Ex-Devadasi children) ತಮ್ಮ ತಂದೆಯ ಹೆಸರನ್ನು ಶೈಕ್ಷಣಿಕ ಅಥವಾ ಇತರೆ ಅರ್ಜಿ ನಮೂನೆಗಳಲ್ಲಿ ಭರ್ತಿ ಮಾಡುವುದನ್ನು ಐಚ್ಛಿಕವಾಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಈ ಮಕ್ಕಳಿಗೆ ಶೈಕ್ಷಣಿಕ ಹಕ್ಕು ಕೊಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳು
ಶಿಕ್ಷಣಕ್ಕೆ ಸೇರಬೇಕಾದಲ್ಲಿ ಅರ್ಜಿಯಲ್ಲಿ ತಂದೆಯ ಹೆಸರನ್ನು ಉಲ್ಲೇಖಿಸುವುದು ಕಡ್ಡಾಯವಾಗಿತ್ತು. ಇನ್ನು ಹಾಸ್ಟೆಲ್ ಸೇರಿದಂತೆ ಮತ್ತಿತರ ಸೌಲಭ್ಯವನ್ನು ಪಡೆಯಲು ಸಲ್ಲಿಸುವ ಅರ್ಜಿಯಲ್ಲಿಯೂ ತಂದೆಯ ಹೆಸರನ್ನು ನಮೂದು ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ದೇವದಾಸಿಯರ ಬಹಳಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರು. ಇದು ಡ್ರಾಪೌಟ್ ಬಗ್ಗೆ ಅಧ್ಯಯನ ಮಾಡುವಾಗ ಈ ವಿಚಾರವು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಾಜಿ ದೇವದಾಸಿಯರ ಮಕ್ಕಳಿಗೆ ಅರ್ಜಿ ನಮೂನೆಗಳಲ್ಲಿ ತಂದೆಯ ಹೆಸರನ್ನು ತೆಗೆದುಹಾಕಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿತ್ತು. ಈ ವಿಚಾರವಾಗಿ ಚರ್ಚೆಸಲು ಗುರುವಾರ ಸಭೆಯನ್ನು ನಡೆಸಲಾಗಿತ್ತು.
ಅಧಿಕೃತ ಸುತ್ತೋಲೆಗೆ ಸೂಚನೆ
ಮಾಜಿ ದೇವದಾಸಿಯರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಹತ್ವದ ಸಭೆ ನಡೆಸಿದ ಸಚಿವದ್ವಯರಾದ ಹಾಲಪ್ಪ ಆಚಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಮಾಜಿ ದೇವದಾಸಿಯರ ಮಕ್ಕಳಿಗೆ ತಂದೆಯ ಹೆಸರನ್ನು ಐಚ್ಛಿಕವಾಗಿಸುವ ಆಯ್ಕೆ ನೀಡಿ ಅಧಿಕೃತ ಸುತ್ತೋಲೆಯನ್ನು ಹೊರಡಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸೂಚಿಸಿದರು.
ಅಲ್ಲದೆ, ಈ ಮಕ್ಕಳಿಗೆ ಹಾಸ್ಟೆಲ್ ಪ್ರವೇಶ ಹಾಗೂ ಇತರೆ ಶೈಕ್ಷಣಿಕ ಸೌಲಭ್ಯಗಳಲ್ಲಿ ಮೀಸಲಾತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಚಿವ ಸಂಪುಟದ ಗಮನಕ್ಕೆ ತರುವುದಾಗಿ ಸಚಿವದ್ವಯರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ | ಗುಜರಾತ್ ಸಿಎಂ ಆಯ್ಕೆ ವೀಕ್ಷಕರಾಗಿ ಬಿ.ಎಸ್. ಯಡಿಯೂರಪ್ಪ: ಅಹಮದಾಬಾದ್‌ಗೆ ಹೊರಟ ಮಾಜಿ ಸಿಎಂ