ಬೆಳಗಾವಿ: ವಿಧಾನಸಭೆ ಅಧಿವೇಶನದ ವೇಳೆ ಗೂಂಡಾವರ್ತನೆ ತೋರಿದ್ದ ಎಂಇಎಸ್ ಪುಂಡರು ಮತ್ತೆ ಕಿರಿಕ್ ಮಾಡಿದ್ದಾರೆ. ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದ ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ,, ವರನ ಸಹೋದರ ಭರಮಾ ಸೇರಿದಂತೆ ಐವರು ಹಲ್ಲೆಯಿಂದಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಗುರುವಾರ ಸೈಬಣ್ಣವರ್ ಅವರ ಮನೆಯಲ್ಲಿ ಮದುವೆ ನಡೆಯುತ್ತಿತ್ತು. ರಾತ್ರಿ ಬ್ಯಾಂಡ್ ಹಾಕಿ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕುಟುಂಬಸ್ಥರು ಕರೆದೊಯ್ಯುತ್ತಿದ್ದರು. ಈ ವೇಳೆ ಕನ್ನಡ ಧ್ವಜ ಹಿಡಿದು ‘ಕರುನಾಡೇ’ ಹಾಡಿಗೆ ಯುವಕರು ಕುಣಿದು ಕುಪ್ಪಳಿಸುತ್ತಿದ್ದರು. ಇದರಿಂದ ಕ್ರೋಧಗೊಂಡ ಎಂಇಎಸ್ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಜಯ್ ಯಳ್ಳೂರಕರ್, ಆಕಾಶ್ ಸೇರಿ 10 ಮಂದಿ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಗೆ ಕುಟುಂಬಸ್ಥರಿಂದ ದೂರು ಸಲ್ಲಿಸಿದ್ದಾರೆ.
10 ಆರೋಪಿಗಳ ಬಂಧನ
ಕಳೆದ ರಾತ್ರಿ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, 10 ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಕೆಲ ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ಏನಾದರೂ ದ್ವೇಷ ಇತ್ತಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಆರೋಪಿಗಳ ವಿರುದ್ಧ ಆರು ತಿಂಗಳ ಹಿಂದೆ ಬೈಕ್ ಸುಟ್ಟಿದ್ದರೆಂಬ ಮಾಹಿತಿ ಇದೆ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸ್ಥಳದಲ್ಲಿ ಒಂದು ಸಿಎಆರ್ ತುಕಡಿ ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಾಮಫಲಕ ವಿಚಾರ ಜಗಳ
ಎರಡು ತಿಂಗಳ ಹಿಂದೆ ಕಿತ್ತೂರು ರಾಣಿ ಚನ್ನಮ್ಮ ನಗರ ಎಂದು ಕನ್ನಡಿಗ ಯುವಕರು ಬೋರ್ಡ್ ಹಾಕಿದ್ದರು. ನಂತರ ಧರ್ಮವೀರ ಛತ್ರಪತಿ ಸಂಭಾಜಿ ನಗರ ಎಂದು ಮೂರು ದಿನಗಳ ಹಿಂದೆ ಕನ್ನಡ ಬೋರ್ಡ್ ಮುಂದೆ ಮರಾಠಿ ಬೋರ್ಡ್ ಎಂದು ಕೆಲವರು ಹಾಕಿದ್ದಾರೆ. ಈ ವಿಚಾರವಾಗಿ ಕನ್ನಡಿಗ ಹಾಗೂ ಮರಾಠಿ ಭಾಷಿಕ ಯುವಕರ ಮಧ್ಯೆ ವೈಷಮ್ಯ ಬೆಳೆದು ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ.
ತೀವ್ರ ಆಕ್ರೋಶ
ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದ ಘಟನೆ ಖಂಡಿಸಿ ಕರವೇ ಹಾಗೂ ಕುಟುಂಬಸ್ಥರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಳಗಾವಿಯ ಸಾಹಿತ್ಯ ಭವನದ ಎದುರು ಎಂಇಎಸ್ ಪುಂಡರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | LOVE JIHAD| ಲವ್ ಜಿಹಾದ್‌ಗೆ ಕುಂದಾಪುರದ ಹಿಂದೂ ಯುವತಿ ಬಲಿ