ಬೆಂಗಳೂರು: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ (Namma Metro Collapse) ಘಟನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಂಡ ಬುಧವಾರ ತನಿಖೆ ಆರಂಭಿಸಿತು. ಘಟನೆಗೆ ನಿಜವಾದ ಕಾರಣ ಏನು ಎಂಬುದರ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೂಲಕ ತನಿಖೆ ನಡೆಸಿ ವರದಿ ಸಲ್ಲಿಸಲು ಬಿಎಂಆರ್‌ಸಿಎಲ್ ಮನವಿ ಮಾಡಿತ್ತು. ಈ ಸಂಬಂಧ ಐಐಎಸ್‌ಸಿ ಸಂಸ್ಥೆಯು ತನಿಖೆಗೆ ಒಪ್ಪಿಗೆ ಸೂಚಿಸಿತ್ತು. ಹೀಗಾಗಿ ಬುಧವಾರ ಸಂಜೆ IISC ಪ್ರೊಫೆಸರ್ ಚಂದ್ರಕಿಶನ್ ಮತ್ತು ತಂಡದವರು ಪರಿಶೀಲನೆ ನಡೆಸಿದರು.
ಕಬ್ಬಿಣದ ತೂಕ ಜಾಸ್ತಿ ಆಗಿ ನಿರ್ಮಾಣ ಹಂತದ ಪಿಲ್ಲರ್ ಬಿದ್ದಿದೆ. ಪಿಲ್ಲರ್‌ಗೆ ಸಪೋರ್ಟ್ ಕೊಡಬೇಕಿತ್ತು. ಪ್ರಾಥಮಿಕ ತನಿಖೆಯಲ್ಲಿ ತಪ್ಪಾಗಿರುವುದು ತಿಳಿದುಬಂದಿದೆ ಎಂದು ಐಐಎಸ್‌ಸಿ ಪ್ರೊಫೆಸರ್ ಚಂದ್ರಕಿಶನ್ ತಿಳಿಸಿದರು. ಸದ್ಯ ಸ್ಥಳದಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲಾಗುತ್ತಿದ್ದು, ಯಾವಾಗ ಕಬ್ಬಿಣ ಹಾಕಲಾಗಿದೆ, ಯಾವಾಗ ಕೆಲಸ ಆರಂಭಿಸಲಾಗಿದೆ. ಕಾಮಗಾರಿಗೆ ಬಳಸಿದ ಕಟ್ಟಡ ಸಾಮಗ್ರಿಗಳ ಬಗ್ಗೆ ವರದಿ ಕೇಳಿದ್ದೇವೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತನಿಖೆ ಮಾಡುತ್ತಿದ್ದೇವೆ ಎಂದು ಚಂದ್ರ ಕಿಶನ್ ತಿಳಿಸಿದರು.
ಏನಿದು ಪಿಲ್ಲರ್ ಕುಸಿತ ಪ್ರಕರಣ?
ಜನವರಿ 10ರಂದು ಮುಂಜಾನೆ ನಾಗವಾರ ಸಮೀಪ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ (Namma Metro Pillar) ಕುಸಿತವಾಗಿ ತಾಯಿ-ಮಗು ದುರ್ಮರಣ ಹೊಂದಿದ್ದರು. ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಮೋಟರೋಲಾದಲ್ಲಿ ಇಂಜಿನಿಯರ್ ಆಗಿರುವ ತೇಜಸ್ವಿನಿ ಅವರನ್ನು ಪತಿ ಲೋಹಿತ್ ಎಂದಿನಂತೆ ಕಚೇರಿಗೆ ಬಿಟ್ಟು ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಬಿಡಲು ತೆರಳುತ್ತಿದ್ದರು. ಆದರೆ ಯಮಸ್ವರೂಪಿಯಾಗಿ ಕಾದು ನಿಂತಿದ್ದ ಮೆಟ್ರೋ ಪಿಲ್ಲರ್‌ಗಳು ಏಕಾಏಕಿ ಮರಕ್ಕೆ ಉರುಳಿ, ಆ ಮರವು ಬೈಕ್‌ನಲ್ಲಿ ಬರುತ್ತಿದ್ದ ತೇಜಸ್ವಿನಿಯ ತಲೆ ಮೇಲೆ ಹಾಗೂ ಎರಡೂವರೆ ವರ್ಷದ ಮಗು ವಿಹಾನ್ ಬಲಭಾಗದ ಮೇಲೆ ಬಿದ್ದಿತ್ತು. ತೀವ್ರ ರಕ್ತಸ್ರಾವದಿಂದಾಗಿ ಅವರಿಬ್ಬರು ಚಿಕಿತ್ಸೆ ಫಲಿಸದೇ ಮಂಗಳವಾರ ಮೃತಪಟ್ಟಿದ್ದರು.