ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ಫೆ.13ರಿಂದ ಬಿಸಿಯೂಟ ನೌಕರರು (Midday Meal Workers) ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣಕ್ಕೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬುಧವಾರ ಮುಂದಾದರು. ಈ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ, ರಾಜ್ಯದಲ್ಲಿ ಬಿಸಿಯೂಟ ಕಾರ್ಯಕರ್ತೆಯರು 1.19 ಲಕ್ಷ ಜನ ಇದ್ದಾರೆ. ನಿವೃತ್ತಿ ಆದವರಿಗೆ ಪಿಎಫ್ ನೀಡುತ್ತಿಲ್ಲ, ಈ ಕೂಡಲೇ ಪಿಎಫ್ ನೀಡಬೇಕು. ಕಾರ್ಯಕರ್ತೆಯರಿಗೆ ಬೇಸಿಗೆ ಮತ್ತು ದಸರಾ ರಜೆ ವೇತನ ನೀಡಬೇಕು. ಅಪಘಾತದಲ್ಲಿ ಮರಣ ಹೊಂದಿದ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು. ಆದರೆ, ಇದ್ಯಾವುದನ್ನೂ ಕಾರ್ಯಕರ್ತೆಯರಿಗೆ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕಳೆದ ಮೂರು ದಿನದಿಂದ ಪ್ರತಿಭಟನೆ ಮಾಡುತ್ತಿದ್ದರೂ, ಸೌಜನ್ಯಕ್ಕೂ ಕೂಡ ಸ್ಥಳಕ್ಕೆ ಶಿಕ್ಷಣ ಸಚಿವರು ಬಂದಿಲ್ಲ, ಜತೆಗೆ ಇಲಾಖೆಯ ಅಧಿಕಾರಿಗಳು ಕೂಡ ಬರುವ ಪ್ರಯತ್ನ ಮಾಡಿಲ್ಲ. ಕಾರ್ಯಕರ್ತರ ಸಮಸ್ಯೆಗಳನ್ನು ಅಲಿಸದೇ ಇರುವಷ್ಟು ಕಾರ್ಯನಿರತರಾಗಿದ್ದಾರೆಯೇ ಎಂದು ಕಿಡಿಕಾರಿದರು.
ಸ್ಥಳಕ್ಕಾಗಮಿಸಿದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಎದುರು ಕಣ್ಣೀರು ಹಾಕಿ ನೋವು ತೋಡಿಕೊಂಡರು. ಯಾವ ಸರ್ಕಾರವೂ ನಮಗೆ ಸೂಕ್ತ ಹಣ ಕೊಟ್ಟಿಲ್ಲ, ಎಲ್ಲದಕ್ಕೂ ದೇಣಿಗೆ ಬೇಡುತ್ತೇವೆ. ಅಡುಗೆ ಮಾಡುವವರಿಗೆ ಶಾಲೆಯಲ್ಲಿ ಕಿಮ್ಮತ್ತು ಇಲ್ಲ. ನಾವೇನು ಸಾವಿರಗಟ್ಟಲೇ ಸಂಬಳ ಕೇಳಿದ್ದೀವಾ? ಕೇಳಿರೋ ಅಲ್ಪ ಹಣವನ್ನು ಕೊಡಲು ಆಗುವುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಸರ್ಕಾರವು ಪೊಲೀಸರ ಮೂಲಕ ದಬ್ಬಾಳಿಕೆ ನಡೆಸಿ ಬಿಸಿಯೂಟ ನೌಕರರನ್ನು ಬಂಧಿಸಿರುವುದು ಸರಿಯಲ್ಲವೆಂದು ಡಿವೈಎಫ್ಐ ರಾಜ್ಯ ಸಮಿತಿಯು ಖಂಡಿಸಿದೆ. ಯಾವುದೇ ಭದ್ರತೆ ಇಲ್ಲದೇ ನಿವೃತ್ತಿಯಾಗುವವರೆಗೆ ದುಡಿಸಿಕೊಂಡು, ಪಿಂಚಣಿ ನೀಡದೆ ಸೇವೆಯಿಂದ ಬಿಡುಗಡೆಗೊಳಿಸುವುದು ನಿಜಕ್ಕೂ ಅಮಾನವೀಯವಾದುದು ಎಂದು ಹೇಳಿದರು.
ನೌಕರರಿಗೆ ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ, ಈಗ ನಿವೃತ್ತಿ ಹೊಂದಿದ 6000 ನೌಕರರಿಗೆ ಪಿಎಫ್ (ಇಡಿಗಂಟು) ರೂ. 1,00,000/- ಪರಿಹಾರ ತೆಗದಿರಿಸಬೇಕು. ಹೆಚ್ಚುತ್ತಿರುವ ಬೆಲೆ ಏರಿಕೆಗನುಗುಣವಾಗಿ ಕನಿಷ್ಠ ವೇತನ ನೀಡಬೇಕು. ಅಕ್ಷರ ದಾಸೋಹ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: Karnataka Election: ಟಿಪ್ಪುನನ್ನು ಹೊಡೆದು ಹಾಕಿದಂತೆಯೇ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು: ಅಶ್ವತ್ಥನಾರಾಯಣ
ಬಿಸಿಯೂಟ ನೌಕರರ ಬೇಡಿಕೆ ಏನು?
-ಫೆ.13ರಂದು ನಿವೃತ್ತಿ ಹೊಂದಿದ 6000 ಬಿಸಿಯೂಟ ನೌಕರರಿಗೆ ಇಡಿಗಂಟು 1 ಲಕ್ಷ ರೂ. ಜಾರಿಗಾಗಿ ಒತ್ತಾಯ
-ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು.
-ಅಡುಗೆ ಸಿಬ್ಬಂದಿ ಅಪಘಾತದಲ್ಲಿ ಮರಣ ಹೊಂದಿದರೆ ಕುಟುಂಬದವರಿಗೆ ಉದ್ಯೋಗ ನೀಡಬೇಕು