ವಿಜಯನಗರ: ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ (Midday Meal) ಹುಳಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಹರಪ್ಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವಾರ್ಡ್ ಸಭೆಗೆ ಮುತ್ತಿಗೆ ಹಾಕಿದ್ದಾರೆ.
ಬಿಸಿಯೂಟ ತಯಾರಿಸಲು ಬಳಸುವ ತೊಗರಿಬೇಳೆ, ಅಕ್ಕಿಯಲ್ಲಿ ಹುಳುಗಳು ಪತ್ತೆ ಆಗಿದ್ದು, ಇದನ್ನು ತಿನ್ನುವುದಾದರೂ ಹೇಗೆಂದು ಅಸಮಾಧಾನ ಹೊರಹಾಕಿದರು. ಊಟದ ತಟ್ಟೆ ಸಮೇತ ವಾರ್ಡ್ ಸಭೆಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದರು. ತಿನ್ನುವ ಆಹಾರದಲ್ಲಿ ಹುಳಗಳು ಪತ್ತೆಯಾಗಿದ್ದು, ಅದನ್ನು ತಿನ್ನುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದರು.
ವಾರ್ಡ್ ಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದೆಯೇ ತಟ್ಟೆಯಲ್ಲಿದ್ದ ಹುಳಗಳ ಪ್ರದರ್ಶನ ಮಾಡಿದ ಮಕ್ಕಳು, ಆಹಾರದಲ್ಲಿ ಹುಳ ಪತ್ತೆ ಆಗಿದ್ದಕ್ಕೆ ಅಡುಗೆ ಸಿಬ್ಬಂದಿಯ ಮೇಲೆ ಗರಂ ಆದರು. “ನೋಡಿ ಸಾರ್.. ಊಟದಲ್ಲಿ ಹುಳಗಳು ಹೇಗಿವೆ? ಇದನ್ನು ಹೇಗೆ ಊಟ ಮಾಡಬೇಕು ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಈ ವೇಳೆ ವಾರ್ಡ್ ಸಭೆ ಮುಗಿದ ಬಳಿಕ ಜನಪ್ರತಿನಿಧಿಗಳು, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ಗುಣಮಟ್ಟದ ಆಹಾರ ಒದಗಿಸುವಂತೆ ಶಿಕ್ಷಕರು, ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ನುಸಿ ಇರುವ ಧಾನ್ಯಗಳನ್ನು ಬಳಸದೆ, ಉತ್ತಮ ಆಹಾರ ಧಾನ್ಯಗಳನ್ನು ಮಕ್ಕಳಿಗೆ ನೀಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ರುದ್ರಪ್ಪ ತಾಕೀತು ಮಾಡಿದರು.
ಇದನ್ನೂ ಓದಿ | ಮಂಗಳೂರು ಸ್ಫೋಟ: ಶಾರಿಕ್ ಟೆಕ್ನಾಲಜಿ ಬಳಕೆಯಲ್ಲಿ ಪರಿಣತ; ತನಿಖಾಧಿಕಾರಿಗಳನ್ನೂ ಮೀರಿಸುವ ತಂತ್ರಗಾರಿಕೆ ಗೊತ್ತು!