ಬೆಂಗಳೂರು: ಲಾಲ್‌ಬಾಗ್ ಉದ್ಯಾನವನ ರಾಜಧಾನಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಫ್ಲವರ್ ಶೋ ಸಂದರ್ಭದಲ್ಲಿ ವಿವಿಧೆಡೆಯಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಸುಂದರವಾದ ಬಗೆಬಗೆಯ ಹೂಗಳು, ಸಸಿಗಳು, ಅಪರೂಪದ ಮರಗಳಲ್ಲದೇ ಶೀಘ್ರದಲ್ಲೇ ನಿತ್ಯ ಹರಿದ್ವರ್ಣ ಕಾಡನ್ನೂ ನೋಡುವ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.
ಹೌದು, ಲಾಲ್‌ಬಾಗ್‌ನಲ್ಲಿ ಸುಮಾರು 6 ಎಕರೆ ಜಾಗದಲ್ಲಿ ಪಶ್ಚಿಮ ಘಟ್ಟದಂತಹ ಅರಣ್ಯವನ್ನು ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾಗುತ್ತಿದೆ. ಹೀಗಾಗಿ ಜನರು ಇನ್ಮುಂದೆ ದಟ್ಟಾರಣ್ಯ ನೋಡಲು ಪಶ್ಚಿಮ ಘಟ್ಟಗಳಿಗೆ ಹೋಗಬೇಕಿಲ್ಲ. ಬದಲಾಗಿ ನಗರದ ಸಸ್ಯಕಾಶಿ ಲಾಲ್ ಬಾಗ್ ಬಂದ್ರೆ ಸಾಕು. ಇಲ್ಲಿ ನಿತ್ಯ ಹರಿದ್ವರ್ಣ ಕಾಡಿನ ಅನುಭವ ಪಡೆಯಬಹುದಾಗಿದೆ.
ಲಾಲ್ ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯು 6 ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಬಗೆಯ ನಿತ್ಯ ಹರಿದ್ವರ್ಣ ಗಿಡಗಳನ್ನು ಬೆಳೆಸುತ್ತಿದ್ದು, ಪಶ್ಚಿಮ ಘಟ್ಟದ ರೀತಿ ಅರಣ್ಯ ಅಭಿವೃದ್ಧಿಪಡಿಸಲು ಮುಂದಾಗಿದೆ. ಈಗಾಗಲೇ ಈ ಗಿಡಗಳನ್ನು ಹಾಕಿ 5 ರಿಂದ 6 ತಿಂಗಳು ಕಳೆದಿದ್ದು, ಇನ್ನು ಐದು ವರ್ಷದಲ್ಲಿ ಈ ಗಿಡಗಳು ದೊಡ್ಡದಾಗಿ ಬೆಳೆಯಲಿವೆ. ಇದರಿಂದ ದಟ್ಟ ಕಾಡು ಇಲ್ಲಿ ನಿರ್ಮಾಣವಾಗಲಿವೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಕರ್ನಾಟಕದ ಏಳು ಜಿಲ್ಲೆಗಳಿಂದ ಈ ಸಸ್ಯಗಳನ್ನು ಇಲ್ಲಿಗೆ ತರಲಾಗಿದ್ದು, ಆ ಸಸ್ಯಗಳಲ್ಲಿ ಅಪರೂಪದ, ಅಳಿವಿನಂಚಿನಲ್ಲಿರುವ, ಸ್ಥಳೀಯ ಸಸ್ಯಗಳು ಇವೆ.
ಬೆಂಗಳೂರಿನ ಲಾಲ್‌ಬಾಗ್ ಉದ್ಯಾನದಲ್ಲಿ ಈಗಾಗಲೇ 2350 ಜಾತಿ ಸಸ್ಯ, ವೃಕ್ಷಗಳಿವೆ. ಇಲ್ಲಿರುವ ಕೆಲವು ಮರಗಳು 200 ವರ್ಷಗಳಿಗಿಂತ ಹಳೆಯದಾಗಿವೆ. ಇದೀಗ ಪಶ್ಚಿಮ ಘಟ್ಟದಂತಹ ಅರಣ್ಯ ನಿರ್ಮಾಣಕ್ಕಾಗಿ ಉಳುಗೇರಿ, ಪ್ರುತ್ರಂಜೀವ, ಎಣ್ಣೆ ಮರ, ಗಾರ್ಸಿನಿಯಾ, ಮ್ಯಾಂಗೋ ಸ್ಟೀನ್, ನವಿಲಾಡಿ, ದೂಪದ ಮರ, ಡಯಾಸ್ ಸ್ಪರಸ್, ಪಾಲ್ಸ ಹಣ್ಣು, ಸ್ರೋಪ್ ಪೈನ್, ಅಂಟುವಾಳ, ಮಡ್ಡಿ ದೀಪದ ಮರ, ಸ್ಫೈಸ್ ಮರಗಳು, ರುದ್ರಾಕ್ಷಿ ಮರ, ತಾರೇ ಮರ, ಆರ್ಡಿಸಿಯಾ ಎಮಿಲಿಸಿಸ್ ಸೇರಿದಂತೆ ಹಲವು ಅಪರೂಪದ ಗಿಡಗಳನ್ನು ನೆಡಲಾಗಿದೆ.
ಇದನ್ನೂ ಓದಿ | Spring Tourism: ವಸಂತ ಕಾಲದಲ್ಲಿ ವೀಕ್ಷಿಸಲೇಬೇಕಾದ ಭಾರತದ ರಮ್ಯ ತಾಣಗಳಿವು!
ಈ ಅರಣ್ಯ ನಿರ್ಮಿಸಲು ಒಟ್ಟು 45 ಲಕ್ಷದಷ್ಟು ಖರ್ಚು ಮಾಡಿದ್ದು, ಸದ್ಯ ಬೊಟಾನಿಕಲ್ ಗಾರ್ಡನ್ ಬಗ್ಗೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ನೋಡುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಮರಗಳು ದೊಡ್ಡದಾದ ನಂತರ ಪ್ರವಾಸಿಗರಿಗೆ ನೋಡಲು ಅವಕಾಶ ಸಿಗಲಿದೆ.