ಹೊಸಪೇಟೆ: ನನ್ನ ವಿರುದ್ಧದ “ಪೆಟ್ರೋಲ್ ಹಾಕಿ ಸುಡುತ್ತೇನೆ” ಎಂಬ ಜೀವ ಬೆದರಿಕೆ ಆರೋಪ ತಡವಾಗಿ ಗಮನಕ್ಕೆ ಬಂದಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ, ನಾನು ಮಂತ್ರಿಯಾಗಿ ಯಾರೊಬ್ಬರ ಮೇಲೂ ಪ್ರಭಾವ ಬಳಸಿಲ್ಲ. ಈ ಬಗ್ಗೆ ತನಿಖೆಯಾದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಪೋಲಪ್ಪ ಕುಟುಂಬಸ್ಥರು ಎಸ್‌ಪಿ ಕಚೇರಿ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಮಡಿವಾಳ ಸಮಾಜ ಹಾಗೂ ನನ್ನ ವಿರುದ್ಧ ಆರೋಪ ಮಾಡಿರುವ ಪೋಲಪ್ಪ ಎಂಬುವವರ ನಡುವಿನ ಜಮೀನು ವಿವಾದವಾಗಿದೆ. ಮಡಿವಾಳ ಸಮಾಜದ ಮಹಿಳೆಯನ್ನು ಪೋಲಪ್ಪ ಮದುವೆ ಮಾಡಿಕೊಂಡಿದ್ದಾನೆ, ಆತ ಯಾವ ಸಮುದಾಯದವರು ಎಂಬುವುದು ನನಗೆ ಗೊತ್ತಿಲ್ಲ. ಪೋಲಪ್ಪ ಹಾಗೂ ಮಡಿವಾಳ ಸಮಾಜದ ಮುಖಂಡರಿಗೆ ಚರ್ಚೆಯ ಮೂಲಕ ರಾಜಿ ಮಾಡಲು ಯತ್ನಿಸಿದ್ದೆ. ಇದಕ್ಕಾಗಿ ನನ್ನ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪೋಲಪ್ಪ ವಾಸ ಮಾಡುವ ಜಾಗ ತಮ್ಮದೆಂದು ಮಡಿವಾಳ ಸಮಾಜದವರು ಹೇಳಿದ್ದಾರೆ. ಆ ಜಾಗ ಚಿತ್ರದುರ್ಗದ ಮಡಿವಾಳ ಮಠದ ಹೆಸರಲ್ಲಿನಲ್ಲಿ ಇದೆ ಎಂಬ ವಿಚಾರ ಗೊತ್ತಾಗಿದೆ. ಆ ಮಠದವರೂ ಬಂದು ನನ್ನನ್ನು ಭೇಟಿ ಮಾಡಿದ್ದರು. ಅವರಿಗೆ ದಾಖಲೆ ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದೆ. ಇತ್ತೀಚೆಗೆ ಮಡಿವಾಳ ಸಮಾಜದವರ ಮನವಿ ಮೇರೆಗೆ ನಾನು ಸ್ಥಳಕ್ಕೆ ಹೋಗಿ, ಇದು ನಿನ್ನ ಪಿತ್ರಾರ್ಜಿತ ಆಸ್ತಿ ಅಲ್ಲ, ನಿನ್ನ ಅತ್ತೆ ಮಾವನಿಗೆ ಸಂಬಂಧಿಸಿದ್ದು. ನೀನು ಮಾತಾಡಬೇಡ ಎಂದು ಪೋಲಪ್ಪಗೆ ಸಲಹೆ ನೀಡಿದೆ. ಹೀಗಾಗಿ ಪೋಲಪ್ಪ ನಾನು ದೌರ್ಜನ್ಯ ಮಾಡಿದ್ದೇನೆ ಎಂದು ಆರೋಪಿಸಿರುವುದಾಗಿ ತಿಳಿಸಿದ ಅವರು, ಬಂಗಲೆ ಅಕ್ರಮವಾಗಿ ಕಟ್ಟಿರುವ ಬಗ್ಗೆ ನನ್ನ ಮೇಲೆ ಆರೋಪವಿದೆ. ಆರೋಪ ನಿಜವಾದರೆ ಇಲಾಖೆಗಳಿವೆ ತನಿಖೆ ಮಾಡಲಿ, ತಪ್ಪಿದ್ದರೆ ಕ್ರಮ ಕೈಗೊಳ್ಳಲಿ. ನಾನು ಯಾರ ಮೇಲೂ ಜಾತಿನಿಂದನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಆನಂದ್ ಸಿಂಗ್ ಧಮಕಿ ಹಾಕಿದ್ದಾರೆ: ಪೋಲಪ್ಪ ಆರೋಪ
ನಾವು ವಾಸ ಮಾಡುತ್ತಿರುವ ಜಾಗ ಆನಂದ್ ಸಿಂಗ್, ಸರ್ಕಾರ ಅಥವಾ ಮಡಿವಾಳ ಸಮಾಜಕ್ಕೆ ಸಂಬಂಧಿಸಿದ್ದಲ್ಲ.
80 ವರ್ಷಗಳ ಹಿಂದೆ ಮಲ್ಲಿಕಾರ್ಜುನ ವಿರಕ್ತ ಮಠದ ಶ್ರೀಗಳು ನಮ್ಮ ಹೆಂಡತಿಯ ತಾತನವರಿಗೆ ನೀಡಿದ್ದಾರೆ.
ಅಂದಿನಿಂದ ಈ ಆಸ್ತಿಯನ್ನು ಅವರು, ಅವರ ನಂತರದವರು ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಆರು ತಿಂಗಳ ಹಿಂದೆ ಆನಂದ್ ಸಿಂಗ್ ಅವರ ಅವ್ಯವಹಾರದ ಬಗ್ಗೆ ನಾನು ದಾಖಲಾತಿ ಬಿಡುಗಡೆ ಮಾಡಿದ್ದೆ. ಅಂದಿನಿಂದ ಆನಂದ್ ಸಿಂಗ್ ನನಗೆ ಧಮಕಿ ಹಾಕುತ್ತಾ, ಕಿರುಕುಳ ಕೊಡುತ್ತಿದ್ದಾರೆ. ಅವರ ಅವ್ಯವಹಾರದ ಕುರಿತ ದೂರು ಹಿಂಪಡೆಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಬೆದರಿಸಿದ್ದಾರೆ ಎಂದು ಹೊಸಪೇಟೆಯ ನಿವಾಸಿ ಪೋಲಪ್ಪ ಆರೋಪಿಸಿದ್ದಾರೆ.
ಇದನ್ನೂ ಓದಿ | ಸಚಿವ ಆನಂದ್ ಸಿಂಗ್ ವಿರುದ್ಧ ಜೀವ ಬೆದರಿಕೆ ಆರೋಪ; ಪೆಟ್ರೋಲ್ ಸುರಿದುಕೊಂಡು 9 ಮಂದಿ ಪ್ರತಿಭಟನೆ