Site icon Vistara News

National Science Day: ‘ವಿಜ್ಞಾನ ಗ್ಯಾಲರಿ’ ಶೀಘ್ರವೇ ಲೋಕಾರ್ಪಣೆ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

#image_title

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವಿಜ್ಞಾನದ (National Science Day) ಬಗ್ಗೆ ಆಸಕ್ತಿ ಮೂಡಿಸಲು ಸರ್ಕಾರ ಕೈಗೊಂಡಿರುವ ‘ವಿಜ್ಞಾನ ಗ್ಯಾಲರಿ’ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ನಗರದ ಮಲ್ಲೇಶ್ವರದ 18ನೇ ಕ್ರಾಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿ, ವಿಜ್ಞಾನದ ಬದುಕಿನ ಕುತೂಹಲವನ್ನು ಉತ್ತೇಜಿಸಲು ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳಿಗಾಗಿ 210 ಕೋಟಿ ರೂ.ಗಳನ್ನು ಸರ್ಕಾರ ನೀಡಿದೆ. ಜತೆಗೆ ರಾಜ್ಯದ 11 ಕಡೆ ವಿಜ್ಞಾನ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪದವಿ ಪೂರ್ವ ವಿಜ್ಞಾನ ಪ್ರತಿಭೆಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಲು ‘ಪ್ರಯೋಗ’ ಸಂಸ್ಥೆ ಮೂಲಕ ನಾಗರಾಜ ಮತ್ತು ಅವರ ತಂಡದವರು ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸಿದ ಅವರು, ಯಾವುದೇ ಸರ್ಕಾರಿ ಶಿಕ್ಷಣ ಸಂಸ್ಥೆ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಯವರು ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸಲು ಬಯಸಿದರೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ನುಡಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಆ ನೀಲಿ ಕಡಲು ಮತ್ತು ಮಹಾ ಸಂಶೋಧನೆಯೊಂದು ಹುಟ್ಟಿದ ದಿನ!

ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು ರಾಮನ್ ಎಫೆಕ್ಟ್ ಆವಿಷ್ಕರಿಸಿದ್ದನ್ನು ಗೌರವಿಸಿ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಶ್ರೇಷ್ಠ ವಿಜ್ಞಾನಿಯಾದ ನೊಬೆಲ್ ಪುರಸ್ಕೃತ ಸಿ.ವಿ.ರಾಮನ್ ಅವರು ಮಲ್ಲೇಶ್ವರದಲ್ಲೇ ಇದ್ದವರು. ವಿಜ್ಞಾನಕ್ಕೆ ಬದುಕನ್ನು ಅರ್ಪಿಸಿಕೊಂಡು ಸಮಾಜಕ್ಕೆ ಅವರು ನೀಡಿದ ಕೊಡುಗೆ ನಮಗೆಲ್ಲ ಯಾವತ್ತಿಗೂ ಪ್ರೇರಣೆಯಾಗಬೇಕು ಎಂದು ಆಶಿಸಿದರು. ಇದೇ ವೇಳೆ ಮಲ್ಲೇಶ್ವರದ 18ನೇ ಕ್ರಾಸ್ ಸರ್ಕಾರಿ ಶಾಲೆಯ ಮಕ್ಕಳು ‘ಪುನೀತ್ ಉಪಗ್ರಹ ವಿನ್ಯಾಸ ಹಾಗೂ ಉಡಾವಣೆ’ ಕಾರ್ಯಕ್ರಮದಲ್ಲಿ ತೊಡಗಿರುವುದರ ಬಗ್ಗೆ ಪ್ರಸ್ತಾಪಿಸಿದರು.

ಇದನ್ನೂ ಓದಿ | ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!

ಸ್ವಾಮಿ ವಿವೇಕಾನಂದ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜೆಆರ್‌ಡಿ ಟಾಟಾ ಅವರ ಒಳನೋಟದ ಫಲವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆ ಈಗ ದೇಶದ ಅಗ್ರಮಾನ್ಯ ಸಂಸ್ಥೆಯಾಗಿದೆ. ಈ ಸಂಸ್ಥೆಯು ಬೆಂಗಳೂರು ವಿಜ್ಞಾನ, ತಂತ್ರಜ್ಞಾನ ಹಾಗೂ ಸ್ಟಾರ್ಟಪ್ ನಗರಿಯಾಗಿ ಬೆಳೆಯಲು ಹೆಚ್ಚಿನ ಕೊಡುಗೆ ನೀಡಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಿರ್ದೇಶಕ ಬಸವರಾಜ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಅಯ್ಯಪ್ಪನ್, ವಿಜ್ಞಾನ ಕೌನ್ಸಿಲ್ ಕಾರ್ಯದರ್ಶಿ ಅಶೋಕ್, ಪ್ರಯೋಗ ಸಂಸ್ಥೆ ನಿರ್ದೇಶಕ ನಾಗಭೂಷಣ್, ಪ್ರಾಂಶುಪಾಲ ರತ್ನಾಕರ ಶೆಟ್ಟಿ, ಸರ್ಕಾರಿ ಪದವಿ ಕಾಲೇಜಿ‌ನ ಪ್ರಾಂಶುಪಾಲರಾದ ಪ್ರತಿಮಾ ಮತ್ತಿತರರು ಇದ್ದರು.

Exit mobile version