ವಿಜಯನಗರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ (Development) ವಿಶೇಷ ಪ್ಯಾಕೇಜ್ (Special package) ಘೋಷಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಜಯನಗರ ಜಿಲ್ಲಾ ಶಾಸಕರ ಸಭೆಯಲ್ಲಿ ಮನವಿ ಸಲ್ಲಿಸಿದ ಸಚಿವರು, ನೂತನ ವಿಜಯನಗರ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಬೇಕಿದೆ. ಜಿಲ್ಲಾ ಕಚೇರಿಗಳು, ಅಧಿಕಾರಿ, ಸಿಬ್ಬಂದಿಗಳು ನೇಮಕ ಆಗಬೇಕಿದೆ.
19 ಇಲಾಖೆಗಳಿಗೆ ಕಚೇರಿ ಇಲ್ಲದಂತಹ ಸ್ಥಿತಿ ಇದೆ. 15 ಅಧಿಕಾರಿಗಳು ಬಳ್ಳಾರಿ, ದಾವಣಗೆರೆ, ಕೊಪ್ಪಳ ಜಿಲ್ಲೆಗಳ ಹೊಣೆಗಾರಿಕೆ ಜತೆ ವಿಜಯನಗರದ ಜವಾಬ್ದಾರಿಯನ್ನು ಸಹ ನಿಭಾಯಿಸಬೇಕಿದೆ. ಹೀಗಾಗಿ ಸ್ವಂತ ಕಚೇರಿ, ಅಧಿಕಾರಿ ಸಿಬ್ಬಂದಿ ನೇಮಕ ಆಗಬೇಕಿದೆ.
ಇದನ್ನೂ ಓದಿ: Child Rebirth : ಅಂತ್ಯಕ್ರಿಯೆಗೆ ಮುನ್ನ ಬಾಯಿಗೆ ನೀರು ಹಾಕಿದಾಗ ಉಸಿರಾಡಿದ ಮಗು; ನವಲಗುಂದದಲ್ಲಿ ಪವಾಡ?
ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ತಾಲೂಕುವಾರು ಕೆಡಿಪಿ ಸಭೆಯಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ, ಹಾಸ್ಟೆಲ್‌ಗಳಲ್ಲಿ ಸೌಲಭ್ಯ ಕೊರತೆ ಸೇರಿದಂತೆ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಬೆಳಕಿಗೆ ಬಂದಿವೆ, ಒಂದೊಂದು ತಾಲೂಕಿನಲ್ಲಿ ಭಿನ್ನವಾದ ಜ್ವಲಂತ ಸಮಸ್ಯೆಗಳು ಕಂಡು ಬಂದಿವೆ.
ಭವಿಷ್ಯದಲ್ಲಿ ವಿಜಯನಗರವನ್ನು ಮಾದರಿ ಜಿಲ್ಲೆಯಾಗಿ ರೂಪಿಸಲು ಆರೋಗ್ಯ, ಶಿಕ್ಷಣ, ಕೈಗಾರಿಕೆ, ಉದ್ಯೋಗ ಸೃಷ್ಠಿ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಎಲ್ಲ ವಲಯಗಳಲ್ಲಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ದ ಪಡಿಸಲು ನಿರ್ಧಾರ ಮಾಡಲಾಗಿದೆ. ಆದ್ದರಿಂದ ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Woman dead : ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು
ಈ ಸಂದರ್ಭದಲ್ಲಿ ವಿಜಯನಗರ ಶಾಸಕ ಎಚ್.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ..ಎನ್.ಟಿ.ಶ್ರೀನಿವಾಸ್, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು.