Site icon Vistara News

Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

Lakshmi Hebbalkar visit the Women and Children Nutritious Food Manufacturing Unit at Yaragatti

ಯರಗಟ್ಟಿ: ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೂರಕ ಆಹಾರ ಉತ್ಪನ್ನಗಳು ಪೂರೈಕೆಯಾದರೆ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಪೌಷ್ಠಿಕ ಆಹಾರ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಯಾವುದೇ ಉತ್ಪನ್ನ ಕಳಪೆ ಗುಣಮಟ್ಟದ್ದಿದ್ದರೆ ಎಂಎಸ್‌ಪಿಸಿಯವರೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಅಂಗನವಾಡಿ ಮಕ್ಕಳು ಸ್ವಂತ ಮಕ್ಕಳು ಎಂದು ತಿಳಿದು, ಉತ್ತಮ ಗುಣಮಟ್ಟದ ಪೂರಕ ಆಹಾರಗಳನ್ನು ಒದಗಿಸಬೇಕು. ಕಳಪೆ ಆಹಾರಗಳ ಪೂರೈಕೆಯನ್ನು ಯಾವುದೇ ಕಾರಣದಿಂದ ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Kempegowda Jayanti: ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ; ಸಿದ್ದರಾಮಯ್ಯ

ಸ್ಥಳೀಯ ಮಟ್ಟದಲ್ಲಿ ತಪ್ಪುಗಳಾದರೆ ಅದು ಮೇಲ್ಮಟ್ಟದವರೆಗೆ ಎಲ್ಲರಿಗೂ ಕೆಟ್ಟ ಹೆಸರು ತರುತ್ತದೆ. ಮಕ್ಕಳ ಹಾಗೂ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಗುಣಮಟ್ಟಕ್ಕೆ ಅತೀ ಹೆಚ್ಚು ಆದ್ಯತೆ ನೀಡಬೇಕು. ಘಟಕದ ಪ್ರತಿಯೊಂದು ಉತ್ಪನ್ನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಸಚಿವರು, ಯಾವುದಾದರೂ ಕಳಪೆ ಎಂದು ಕಂಡು ಬಂದರೆ ಘಟಕದವರೇ ತಿರಸ್ಕರಿಸಬೇಕು. ಎಲ್ಲ ಉತ್ಪನ್ನಗಳನ್ನು ಸ್ವಚ್ಛಗೊಳಿಸಿ ಪೂರೈಸಬೇಕು. ಈ ವಿಷಯದಲ್ಲಿ ತಪ್ಪಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಸಿದರು.

ಅಂಗನವಾಡಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಎಲ್ಲ ವಿಭಾಗಗಳನ್ನು ಸಂಪೂರ್ಣ ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಎಂಎಸ್‌ಪಿಸಿ ಘಟಕಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಈ ಸಂದರ್ಭದಲ್ಲಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Exit mobile version