ಶಿವಮೊಗ್ಗ: ಈಸೂರಿನ ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ಸಿಡಿದೆದ್ದು, ಸ್ವಾತಂತ್ರ್ಯ ಹೋರಾಟದ ಕಿಡಿ ಹಚ್ಚಿದ್ದಲ್ಲದೆ ಐವರು ವೀರರು ನೇಣಿಗೆ ಕೊರಳೊಡ್ಡಿ ದೇಶದ ಸ್ವಾತಂತ್ರ್ಯ ಸಮರಕ್ಕೆ ನಾಂದಿ ಹಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ (Independence Day) ಶಿವಮೊಗ್ಗ ಜಿಲ್ಲೆಯ ಜನರ ಪಾತ್ರ ದೊಡ್ಡದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದಿವೆ. ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಸಿಗಂದೂರು ಸೇತುವೆ, ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ರೈಲ್ವೆ ಮಾರ್ಗ ನಿರ್ಮಾಣದಂತಹ ಬೃಹತ್ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿವೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಈ ವರ್ಷ 4566 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು, ಅಮೃತ ಗ್ರಾಮ ಯೋಜನೆಯಡಿ 70 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಸವ ವಸತಿ ಯೋಜನೆಯಡಿ ಜಿಲ್ಲೆಗೆ 6451 ಮನೆಗಳು ಮಂಜೂರಾಗಿದ್ದು, ನರೇಗಾ ಯೋಜನೆಯಡಿ 17 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ 161 ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಇದುವರೆಗೆ 692 ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸಲಾಗಿದೆ. ಅಮೃತ ನಗರೋತ್ಥಾನ ಯೋಜನೆಯಡಿ ಜಿಲ್ಲೆಗೆ 131 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಈ ಬಾರಿ ನಿರೀಕ್ಷೆಯಂತೆ ಉತ್ತಮವಾಗಿ ಮುಂಗಾರು ಮಳೆಯಾಗಿದೆ. ಆದರೆ, ಹಲವು ಕಡೆ ಬೆಳೆ ಹಾನಿ, ಜನ, ಜಾನುವಾರು ಜೀವಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 300 ಮನೆಗಳಿಗೆ ನೀರುನುಗ್ಗಿದ್ದು, ತಲಾ 10 ಸಾವಿರ ರೂಪಾಯಿ ಒಟ್ಟು 30 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಒಟ್ಟು 1033 ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದ್ದು, ಪರಿಹಾರವನ್ನು ಒದಗಿಸುವ ಕಾರ್ಯ ಸಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಜೀವ ಹಾನಿ ಸಂಭವಿಸಿದ್ದು ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 25 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗಿದೆ. ಸಾವಿಗೀಡಾದ 9 ಜಾನುವಾರುಗಳಿಗೆ 1.50 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 3211 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿ ಹಾಗೂ 140 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿ ಉಂಟಾಗಿದ್ದು, ಬೆಳೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
ಶಾಸಕರಾದ ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಡಿಸಿ ಡಾ. ಸೆಲ್ವಮಣಿ, ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ, ಮೇಯರ್ ಸುನೀತಾ ಅಣ್ಣಪ್ಪ ಮತ್ತಿತರರು ಭಾಗಿಯಾಗಿದ್ದರು.
ಶಿಕಾರಿಪುರದ ಸ್ವಾತಂತ್ರ್ಯ ಹಬ್ಬದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಗಿ
ಜಿಲ್ಲೆಯ ಶಿಕಾರಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು. ತಹಸೀಲ್ದಾರ್ ಎಂ.ಪಿ. ಕವಿರಾಜ್ ಧ್ವಜಾರೋಹಣ ನೆರವೇರಿಸಿದರು.
ಆಟೋದಲ್ಲೇ ಬಂದು ಧ್ವಜಾರೋಹಣ ಮಾಡಿದ ಕೆ.ಎಸ್. ಈಶ್ವರಪ್ಪ
ನಗರದ ಹೊಳೆ ಬಸ್‌ಸ್ಟಾಪ್ ಬಳಿಯ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ರಿಕ್ಷಾದಲ್ಲೇ ತೆರಳಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಧ್ವಜಾರೋಹಣ ನೆರವೇರಿಸಿ ಸರಳತೆ ಮೆರೆದಿದ್ದಾರೆ. ತಮ್ಮ ನಿವಾಸದಿಂದ ಆಟೋದಲ್ಲಿಯೇ ಈಶ್ವರಪ್ಪ ಬಂದಿದ್ದರಿಂದ ಆಟೋ ಚಾಲಕರು ಸಂತಸಗೊಂಡರು.