ಯಲ್ಲಾಪುರ: ರಾಣಿ ಚೆನ್ನಮ್ಮ ಹೆಸರಿನಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಈಗಾಗಲೇ 100 ಶಿಶುಪಾಲನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನಗಳನ್ನು ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ನಡೆದ ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರತಿ ಶಿಶು ಪಾಲನಾ ಕೇಂದ್ರಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮಗಳು ನಡೆಯಬೇಕು. ಈ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಕಡ್ಡಾಯವಾಗಿ ಆಹ್ವಾನಿಸಬೇಕು ಎಂದು ಹೇಳಿದರು.
ಇಂತಹ ಸ್ನೇಹ ಮಿಲನ ಕಾರ್ಯಕ್ರಮಗಳಿಂದ ಕಾರ್ಮಿಕರು ತಮ್ಮ ಮಕ್ಕಳ ಕ್ಷಮತೆಯನ್ನು ಅರಿಯಲಿದ್ದಾರೆ ಮತ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರ ಮಕ್ಕಳು ಪಾಲನಾ ಕೇಂದ್ರಗಳಿಗೆ ಸೇರ್ಪಡೆಯಾಗಲಿದ್ದಾರೆ. ಈ ಸ್ನೇಹ ಮಿಲನ ಕಾರ್ಯಕ್ರಮಗಳಿಗೆ ಮಂಡಳಿಯಿಂದ ಸಹಾಯಧನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ | Karnataka Election: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಸ್ಪರ್ಧೆ: ಪ್ರಮೋದ್ ಮುತಾಲಿಕ್
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ದಿನ ನಿತ್ಯ ಕೆಲಸ ಕಾರ್ಯಗಳಿಂದಾಗಿ ತಮ್ಮ ಮಕ್ಕಳ, ಅದರಲ್ಲೂ ಸಣ್ಣ ಮಕ್ಕಳ ಲಾಲನೆ-ಪಾಲನೆ ಕಷ್ಟ ಸಾಧ್ಯವಾಗಿರುವುದನ್ನು ಮನಗಂಡಿರುವ ಕಾರ್ಮಿಕ ಇಲಾಖೆ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಆಟ- ಊಟೋಪಚಾರಕ್ಕಾಗಿ ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಿ ನಿರ್ವಹಿಸುತ್ತಿದೆ ಎಂದರು.
ಪಂಚಾಯತ್ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಹಿರಿಯರಾದ ರಾಮು ನಾಯ್ಕ, ಪ.ಪಂ ಉಪಾಧ್ಯಕ್ಷರಾದ ಶ್ಯಾಮಲಿ ಪಾಟಣಕರ್, ಪ.ಪಂ ಸದಸ್ಯರಾದ ಪ್ರಶಾಂತ ತಳವಾರ, ಗೀತಾ ಭಂಡಾರಿ ಸೇರಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಶಿಶು ಪಾಲನಾ ಕೇಂದ್ರದ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಾಡು ಕಟ್ಟುವ ಕಾಯಕದಲ್ಲಿ ಶ್ರಮಿಸುತ್ತಿರುವ ಶ್ರಮಿಕರ ಮಕ್ಕಳ ಪಾಲನೆ ಪೋಷಣೆಗಾಗಿ ಮಂಡಳಿಯ ವತಿಯಿಂದ ರಾಜ್ಯಾದ್ಯಂತ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಪ್ರೋತ್ಸಾಹಿಸಲು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಶಿಶುಪಾಲನಾ ಕೇಂದ್ರಗಳಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮಂಡಳಿಯ ಮೂಲಕವಾಗಿ ಹಮ್ಮಿಕೊಳ್ಳಲಾಗುವುದು.
| ಶಿವರಾಮ ಹೆಬ್ಬಾರ್, ಕಾರ್ಮಿಕ ಸಚಿವರು