ಸಾಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ “ಕನ್ನಡ ಸಂಸ್ಕೃತಿ ಮೂಲ ಸಂಸ್ಕೃತಿ” ಎನ್ನುವ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (Minister Sunil Kumar) ತಿಳಿಸಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಭಾನುವಾರ ವೇದನಾದ ಪ್ರತಿಷ್ಠಾನ ಮತ್ತು ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ 23ನೇ ವರ್ಷದ ರಾಷ್ಟ್ರೀಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಸಾಂಸ್ಕೃತಿಕ ಚಟುವಟಿಕೆ, ಕಲಾ ಪ್ರಾಕಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಮೂಲ ಸಂಸ್ಕೃತಿ ಕಾರ್ಯಕ್ರಮ ಕೈಗೆತ್ತಿಕೊಂಡಿದೆ. ಲಾವಣಿಗಳು, ಜಾನಪದ, ಭಾವಗೀತೆಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತೆಗೆದುಕೊಂಡು ಹೋಗಲು ಯೋಜನೆ ಪೂರಕವಾಗಿದೆ ಎಂದು ಹೇಳಿದರು.
ತರಬೇತಿ ಶಿಬಿರಗಳು, ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಜಿಲ್ಲಾ, ರಾಜ್ಯಮಟ್ಟದ ಪ್ರದರ್ಶನಗಳನ್ನು ಏರ್ಪಡಿಸಿ ಕಲೆ ಉಳಿಸಿ ಬೆಳೆಸುವ ಸಂಕಲ್ಪ ಕೈಗೊಳ್ಳಲಾಗಿದೆ. ಸಣ್ಣ ಸಣ್ಣ ಕಾರ್ಯಕ್ರಮಗಳು, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನುದಾನ ವಿಸ್ತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ | Urfi Javed | ರೆಕ್ಕೆಗಳಿಂದ ಮಾನ ಮುಚ್ಚಿಕೊಂಡ ಉರ್ಫಿ ಜಾವೇದ್: ಪ್ರತಿ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ ಎಂದ ನೆಟ್ಟಿಗರು!
ಈಗಿನ ಪೀಳಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಿಂದ ವಿಮುಖವಾಗುತ್ತಿವೆ. ಕಳೆದ ಬಾರಿ ಲಕ್ಷ ಕಂಠ ಗಾಯನ, ಕೋಟಿ ಕಂಠ ಗಾಯನ ಕಾರ್ಯಕ್ರಮ ಮಾಡಿದಾಗ ಕೆಲವರು ಟೀಕೆ ಮಾಡಿದ್ದರು. ಆದರೆ ಕೋಟಿ ಕಂಠ ಗಾಯನ ಸಂದರ್ಭದಲ್ಲಿ 1.32 ಕೋಟಿ ಜನರು ಧ್ವನಿಯಾಗಿದ್ದು ಭಾಷೆ ಮತ್ತು ಸಂಸ್ಕೃತಿಯ ತಾಕತ್ತನ್ನು ಪ್ರದರ್ಶನ ಮಾಡಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಸಾಗರದಂತಹ ಊರಿನಲ್ಲಿ 23 ವರ್ಷಗಳಿಂದ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಹೋಗುತ್ತಿರುವ ಪ್ರತಿಷ್ಠಾನ ಕೆಲಸ ಗಮನಾರ್ಹವಾದದ್ದು. ಸಂಗೀತವನ್ನು ಪ್ರೀತಿಸುವ ಮಕ್ಕಳನ್ನು ತಯಾರಿಸುತ್ತಿರುವ ಸಂಸ್ಥೆಯ ಎಲ್ಲ ಕೆಲಸಕ್ಕೆ ಇಲಾಖೆ ಸಹಕಾರ ನೀಡಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜೋಷಿ ಫೌಂಡೇಶನ್‍ನ ಅಬಸೆ ದಿನೇಶ ಕುಮಾರ್ ಜೋಷಿ ಮಾತನಾಡಿ, ಸವಾಲುಗಳ ನಡುವೆ 23 ವರ್ಷಗಳಿಂದ ಸಂಗೀತೋತ್ಸವ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸ್ವಾಗತಾರ್ಹ ಸಂಗತಿ. ಯೋಗಧ್ಯಾನದಲ್ಲಿ ಇಲ್ಲದ, ಮನಸ್ಸು ನಿಯಂತ್ರಿಸುವ ಶಕ್ತಿ ಸಂಗೀತಕ್ಕಿದೆ. ವಸುಧಾ ಶರ್ಮ ಸಾವಿರಾರು ಮಕ್ಕಳಿಗೆ ಸಂಗೀತ ಧಾರೆ ಎರೆದು ಶ್ರೇಷ್ಟರಾಗಿ ನಿಂತಿದ್ದಾರೆ ಎಂದು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಎಚ್.ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು, ನರಸಿಂಹಮೂರ್ತಿ ಹಳೇ ಇಕ್ಕೇರಿ ಉಪಸ್ಥಿತರಿದ್ದರು. ಶ್ರೀರಂಜಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಶ್ರೀಧರ ಹೆಗಡೆ ಸ್ವಾಗತಿಸಿದರು. ವಿದುಷಿ ವಸುಧಾ ಶರ್ಮ ಪ್ರಾಸ್ತಾವಿಕ ಮಾತನಾಡಿದರು. ಗುರುದತ್ತ ಶರ್ಮ ವಂದಿಸಿದರು. ಸಿದ್ದಲಿಂಗಸ್ವಾಮಿ ನಿರೂಪಿಸಿದರು.
ಇದನ್ನೂ ಓದಿ | Shahrukh Khan | ʻಪಠಾಣ್ʼ ಚಿತ್ರೀಕರಣದ ಸೆಟ್ನಿಂದ ವೈರಲ್ ಆಯ್ತು ಶಾರುಖ್ ಫೋಟೊ