Site icon Vistara News

Kannada Flag: ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟು ಉದ್ಧಟತನ ಮೆರೆದ ಕಿಡಿಗೇಡಿಗಳು

Kannada Flag

ಬೆಳಗಾವಿ: ಹೊಸ ವರ್ಷದ ಮೊದಲ ದಿನವೇ ಬೆಳಗಾವಿಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ತಾಲೂಕಿನ ಸುಳಗಾ ಗ್ರಾಮದಲ್ಲಿ ಓಲ್ಡ್‌ಮ್ಯಾನ್ ಪ್ರತಿಕೃತಿ ಸುಟ್ಟ ಬಳಿಕ ಕನ್ನಡ ಧ್ವಜಕ್ಕೂ (Kannada Flag) ಬೆಂಕಿಯಿಟ್ಟ ಘಟನೆ ನಡೆದಿದೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಸುಳಗಾ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಾಡಧ್ವಜ ಅಳವಡಿಸಲಾಗಿತ್ತು. ಹೊಸ ವರ್ಷಾಚರಣೆ ಭಾಗವಾಗಿ ಓಲ್ಡ್‌ಮ್ಯಾನ್ ಪ್ರತಿಕೃತಿ ದಹಿಸಿರುವ ಕಿಡಿಗೇಡಿಗಳು, ನಂತರ ಕನ್ನಡ ಧ್ವಜಕ್ಕೂ ಬೆಂಕಿ ಹಚ್ಚಿದ್ದಾರೆ. ಒಂದೆಡೆ ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಅಭಿಯಾನ ನಡೆಯುತ್ತಿದ್ದರೆ, ಮತ್ತೊಂದೆಡೆ ವರ್ಷದ ಮೊದಲ ದಿನವೇ ನಾಡಧ್ವಜ ಸುಟ್ಟು ಕಿಡಿಗೇಡಿಗಳ ಉದ್ಧಟತನ ತೋರಿರುವುದಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ | Skeletons found : ಐವರ ಅಸ್ಥಿಪಂಜರ ಪತ್ತೆ ಕೇಸ್‌; ಡೇಟ್ ಇಲ್ಲದ ಡೆತ್‌ನೋಟ್ ಪತ್ತೆ!

ಹೊಸ ವರ್ಷದ ಪಾರ್ಟಿಗೆ ಹೋಗಲು ಬಿಡದ್ದಕ್ಕೆ ಬೇಸರ; ಯುವಕ ಆತ್ಮಹತ್ಯೆ!

ಬೆಳಗಾವಿ: ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹೊಸ ವರ್ಷದ ಪಾರ್ಟಿಗೆ (New year Celebration) ಹೋಗಲು ಅವಕಾಶ ನೀಡದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ (Suicide Case) ಅತ್ತ ಬೆಳಗಾವಿಯಲ್ಲಿ ಯುವಕನೊಬ್ಬ ಕೂಡಾ ಇದೇ ಕಾರಣಕ್ಕೆ ಮನ ನೊಂದು ಪ್ರಾಣ ಕಳೆದುಕೊಂಡಿದ್ದಾನೆ (Self Harming).

ಬೆಳಗಾವಿ ಹೊರವಲಯದ ‌ಕಣಬರ್ಗಿ ಗ್ರಾಮದಲ್ಲಿ ‌ವಿಚಿತ್ರ ಘಟನೆ ನಡೆದಿದ್ದು, ಸಿದ್ದರಾಯ ಶಿಗಿಹಳ್ಳಿ (24) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ.

ಸಿದ್ದರಾಯ ಸ್ನೇಹಿತರ ಜೊತೆಗೆ ಹೊಸ ವರ್ಷದ ಪಾರ್ಟಿ ಮಾಡಲು ಯೋಜನೆ ರೂಪಿಸಿದ್ದ. ಆದರೆ, ಪಾರ್ಟಿ ಬೇಡ, ಮನೆಯಲ್ಲಿರು ಎಂದು ಕುಟುಂಬಸ್ಥರು ಬುದ್ಧಿವಾದ ಹೇಳಿದ್ದರು. ಇದರಿಂದ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯುವಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: New year Celebration : ಚಂದದ ಹುಡುಗಿ ಫುಲ್‌ ಟೈಟ್; ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸುಂದರಿ‌

ವರ್ಷದ ಮೊದಲ ದಿನವೇ ಬಿಬಿಎ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು: ಹೊಸ ವರ್ಷ (New Year Celebration) ಎಂದರೆ ಎಲ್ಲರೂ ಹೊಸ ಹೊಸ ಕನಸುಗಳನ್ನು ಹೊತ್ತು ಹೊಸ ಬದುಕಿಗೆ ಅಡಿ ಇಡುವ ದಿನ. ಆದರೆ‌ ಇಲ್ಲೊಬ್ಬಳು ಹುಡುಗಿ ತನ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಳ್ಳುವ ಮೂಲಕ ತನ್ನ ಎಲ್ಲ ಕನಸುಗಳನ್ನು ಕೊಂದು ಹಾಕಿದ್ದಾಳೆ.

ಬೆಂಗಳೂರಿನ ಸುಧಾಮ ನಗರದಲ್ಲಿ (Bangalore News) ಈ ಘಟನೆ ನಡೆದಿದ್ದು, ವರ್ಷಿಣಿ (21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಈಕೆ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುಧಾಮನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ ಯುವತಿ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಭಾನುವಾರ ರಾತ್ರಿ ಗೆಳತಿಯರ ಜತೆ ಹೊಸ ವರ್ಷದ ಪಾರ್ಟಿಗೆ ಹೋಗುತ್ತೇನೆ ಎಂದು ಹೇಳಿದ್ದಳು. ಆದರೆ, ಮನೆಯವರು ಬೇಡ ಎಂದಿದ್ದರು. ಇದರಿಂದ ನೊಂದ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version