ಮಡಿಕೇರಿ: ನಾಲ್ಕು ದಿನಗಳ ಹಿಂದೆ ಕಣ್ಮರೆಯಾಗಿದ್ದ (Missing Case) ವೃದ್ಧ ಮಹಿಳೆಯೊಬ್ಬರನ್ನು ಗ್ರಾಮಸ್ಥರು ಸೋಮವಾರ (ಆ.1) ಪತ್ತೆ ಹಚ್ಚಿದ್ದಾರೆ. ಬೆಟ್ಟವೊಂದರಲ್ಲಿ ಅಸ್ವಸ್ಥರಾಗಿ ಬಿದ್ದಿದ್ದ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ಕಳೆದ ಬುಧುವಾರ (ಜು.27) ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಾಟ್ ಕಾಲೋನಿಯ ನಿವಾಸಿ, ಸೀತಮ್ಮ (80) ಸಂಬಂಧಿಕರ ಮನೆಯಿಂದ ತಮ್ಮ ಮನೆಗೆ ಹೊರಟಿದ್ದರು. ಆದರೆ, ಮನೆಗೆ ಅವರು ವಾಪಸಾಗಿರಲಿಲ್ಲ. ಇದು ಕುಟುಂಬದವರ ಆತಂಕಕ್ಕೆ ಕಾರಣವಾಗಿತ್ತು.
ವೃದ್ಧಾಪ್ಯ ಹಿನ್ನೆಲೆಯಲ್ಲಿ ಇವರಿಗೆ ಮನೆ ದಾರಿ ತಪ್ಪಿದೆ. ಈ ಕಾರಣದಿಂದ ಅವರು ಕಾಡಿನ ಮಧ್ಯೆ ಅಲೆದಾಡಿದ್ದಾರೆ. ನಾಲ್ಕು ದಿನಗಳಾದರೂ ಅವರಿಗೆ ಮನೆಗೆ ಹೋಗುವ ದಾರಿ ಗೊತ್ತಾಗಿರಲಿಲ್ಲ. ಮನೆಗೆ ಬಾರದ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ರೆವಿನ್ಯೂ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮತ್ತಿತರರು ಒಟ್ಟಾಗಿ ನಾಲ್ಕು ದಿನಗಳಿಂದ ಸುತ್ತಮುತ್ತಲಿನ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಸೀತಮ್ಮ ಪತ್ತೆಯಾಗಿರಲಿಲ್ಲ.
ಭಾನುವಾರ ಮತ್ತೆ ಗ್ರಾಮಸ್ಥರೆಲ್ಲ ಸೇರಿಕೊಂಡು ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು 2 ಕಿ.ಮೀ. ದೂರದ ಬೆಟ್ಟದ ಪೊದೆಯಲ್ಲಿ ವೃದ್ಧೆ ಸೀತಮ್ಮ ಪತ್ತೆಯಾಗಿದ್ದಾರೆ. ಅವರನ್ನು ಮನೆಗೆ ಹೊತ್ತು ತಂದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಾಹನದಲ್ಲಿ ನಾಪೋಕ್ಲುಗೆ ಕರೆದುಕೊಂಡು ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ವೃದ್ಧೆ ಚೇತರಿಸಿಕೊಳ್ಳುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ ಬಲ್ಲಮಾವಟಿ ಮಾತನಾಡಿ ʻʻಕಳೆದ ನಾಲ್ಕು ದಿನಗಳಿಂದ ಬೆಟ್ಟ ಪ್ರದೇಶದಲ್ಲಿ ಹತ್ತು ಇಂಚಿಗೂ ಅಧಿಕ ಮಳೆಯಾಗಿದೆ. ಮಳೆ, ಗಾಳಿ, ಚಳಿಗೆ ಊಟ-ಉಪಾಹಾರ ಇಲ್ಲದೆ ವೃದ್ಧೆ ದಿನ ಕಳೆದಿರುವುದು ವಿಸ್ಮಯ. ಈ ಬಗ್ಗೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ದೂರು ನೀಡಲಾಗಿತ್ತು. ಇದೀಗ ಚಿಕಿತ್ಸೆ ನೀಡುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಸೀತಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ ಆಗಿದ್ದು, ಇದೀಗ ಸಂತಸ ತಂದಿದೆʼʼ ಎಂದು ಹೇಳಿದರು.