ತುಮಕೂರು: ಕಾಣೆಯಾಗಿ ಸುದ್ದಿಯಾಗಿದ್ದ ಇಲ್ಲಿನ ಜಯನಗರದ ನಿವಾಸಿ ಅರ್ಜುನ್ ಎಂಬುವವರ ಮನೆಯ ಮುದ್ದಿನ ಆಫ್ರಿಕನ್ ಗಿಳಿ (Parrot) ಮರಳಿ ಮನೆಯವರ ಸೂರು ಸೇರಿದೆ. ಕಾಣೆಯಾದ ಗಿಳಿಯನ್ನು ಹುಡುಕಿ ಕೊಟ್ಟವರಿಗೆ ೫೦ ಸಾವಿರ ರೂಪಾಯಿ ಕೊಡುತ್ತೇನೆ ಎಂದಿದ್ದವರು ಸಿಕ್ಕ ಖುಷಿಗೆ ಹೆಚ್ಚುವರಿ ದುಡ್ಡು ಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಎರಡೂವರೆ ವರ್ಷದಿಂದ ಸಾಕಿದ್ದ ರುಸ್ತಮಾ ಗಿಳಿಯು (Parrot) ಮನೆಯ ಸದಸ್ಯರಲ್ಲಿ ಒಂದು ಎಂಬಂತೆ ನೋಡಿಕೊಂಡಿದ್ದರು. ಆದರೆ, ಜುಲೈ 17ರಂದು ಏಕಾಏಕಿ ಗಿಳಿ ಕಾಣೆಯಾಗಿತ್ತು. 2 ದಿನಗಳು ಕಾದು ನೋಡಿದರೂ ಸಿಗದ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ಬ್ಯಾನರ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ, ಗಿಳಿ ಹುಡುಕಿ ಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು.
ಹೀಗಾಗಿ ಗಿಳಿಯನ್ನು ಹುಡುಕಿಕೊಡುವಂತೆ ಕುಟುಂಬಸ್ಥರು ಸಾರ್ವಜನಿಕವಾಗಿ ಮೊರೆಯಿಟ್ಟಿದ್ದರು. ವಾರದ ಬಳಿಕ ಇದೀಗ ಕಾಣೆಯಾಗಿದ್ದ ರುಸ್ತುಮಾ ಹೆಸರಿನ ಗಿಳಿಯು ಮತ್ತೆ ಗೂಡು ಸೇರಿದ್ದು ಮಾಲೀಕರ ಸಂತಸವನ್ನು ಇಮ್ಮಡಿಗೊಳಿಸಿದೆ.
ಗಿಳಿ ಸಿಕ್ಕಿದ್ದು ಹೇಗೆ?
ಸಿದ್ಧಗಂಗಾ ಮಠದ ಬಂಡೆ ಪಾಳ್ಯದಲ್ಲಿ ಶ್ರೀನಿವಾಸ್ ಎಂಬುವವರ ಮನೆಯ ಟೇರಸ್ ಮೇಲೆ ಗಿಳಿ (Parrot) ಕೂತಿತ್ತು. ಇದನ್ನು ಗಮನಿಸಿದ ಶ್ರೀನಿವಾಸ್ ಕಳೆದ ಭಾನುವಾರವೇ ಗಿಳಿಯನ್ನು ರಕ್ಷಣೆ ಮಾಡಿಕೊಂಡು ಮನೆಯಲ್ಲಿ ಇರಿಸಿಕೊಂಡಿದ್ದರು. ಮನೆಯವರು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿಕೊಂಡಿರುವ ಮನವಿಯನ್ನು ನೋಡಿದ ಅವರು ಮಾಲೀಕ ಅರ್ಜುನ್ ಕೈಗೆ ಗಿಳಿಯನ್ನು ಒಪ್ಪಿಸಿದ್ದಾರೆ.
೩೫ ಸಾವಿರ ರೂ. ಹೆಚ್ಚುವರಿಯಾಗಿ ಕೊಟ್ಟರು!
ತಮ್ಮ ಮನೆಯ ಮುದ್ದಾದ ಗಿಳಿ ಸಿಕ್ಕ ಖುಷಿಯಲ್ಲಿದ್ದ ಕುಟುಂಬದವರು ತಾವು ಹೇಳಿದ್ದಕ್ಕಿಂತ 35 ಸಾವಿರ ರೂ. ಹೆಚ್ಚುವರಿ ಹಣವನ್ನು ನೀಡಿದ್ದಾರೆ. ಮೊದಲು 50 ಸಾವಿರ ರೂಪಾಯಿ ಬಹುಮಾನ ಕೊಡುವುದಾಗಿ ಎಲ್ಲೆಡೆ ಪ್ರಚಾರ ಮಾಡಿದ್ದ ಅರ್ಜುನ್ ಅವರು, ಈಗ 85 ಸಾವಿರ ರೂಪಾಯಿಯನ್ನು ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಬಳಿಕ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.