Site icon Vistara News

ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯಮಾಪನ‌ದಲ್ಲಿ ಎಡವಟ್ಟು; ದ್ವಿತೀಯ ಪಿಯು ವಿದ್ಯಾರ್ಥಿ ಫೇಲ್

ಉತ್ತರ ಪತ್ರಿಕೆ

ಸಾಗರ: ದ್ವಿತೀಯ ಪಿಯುಸಿ ಪರೀಕ್ಷೆ ಉತ್ತರ ಪತ್ರಿಕೆಯನ್ನು ಪೂರ್ಣವಾಗಿ ಮೌಲ್ಯಮಾಪನ ನಡೆಸದೆ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿದ ಎಡವಟ್ಟು ಪ್ರಕರಣ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನಡೆದಿದೆ. ಅರ್ಥಶಾಸ್ತ್ರ ವಿಷಯದಲ್ಲಿ ಕೇವಲ 23 ಅಂಕಗಳಿಸಿ ಫೇಲ್ ಆಗಿದ್ದರಿಂದ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿ ನೋಡಿದಾಗ ಮೌಲ್ಯಮಾಪನ ಕಾರ್ಯ ಅಪೂರ್ಣವಾಗಿರುವುದು ಗಮನಕ್ಕೆ ಬಂದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದ 40 ಪುಟಗಳ ಉತ್ತರ ಪುತ್ರಿಕೆಯಲ್ಲಿ ಮೊದಲ 6 ಪುಟಗಳಲ್ಲಿ ಉತ್ತರ ಬರೆದಿದ್ದಾನೆ. ಆ ನಂತರ 2 ಪುಟಗಳಲ್ಲಿ ಉತ್ತರ ಬರೆಯದೇ ಖಾಲಿ ಬಿಟ್ಟಿದ್ದು, 8ನೇ ಪುಟದಿಂದ 17ನೇ ಪುಟಗಳವರೆಗೆ ಉತ್ತರ ಬರೆದಿದ್ದಾನೆ.

ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕೊಠಡಿ ಮೇಲ್ವಿಚಾರಕರು 18ನೇ ಪುಟದಲ್ಲಿ ನಿಯಮಾನುಸಾರ ಮುಕ್ತಾಯವಾಗಿದೆ ಎಂಬ ಸೀಲ್ ಹಾಕಿರುವ ಕೊಠಡಿ ಮೇಲ್ವಿಚಾರಕರು ತಮ್ಮ ಹಸ್ತಾಕ್ಷರ ಹಾಕಿ, ದಿನಾಂಕ ನಮೂದಿಸಿದ್ದಾರೆ. ಆದರೆ, ಕೆಲ ಪುಟಗಳ ಮೌಲ್ಯಮಾಪನವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ.

ಪರೀಕ್ಷಾ ಮೌಲ್ಯಮಾಪನ ಕಾರ್ಯ ನಡೆಸಿದ ಉಪನ್ಯಾಸಕರು 1ರಿಂದ 24ವರೆಗಿನ ಪ್ರಶ್ನೆಗಳಲ್ಲಿ 20 ಪ್ರಶ್ನೆಗಳ ಮೌಲ್ಯಮಾಪನ ಮಾಡಿದ್ದಾರೆ. ಒಂದು ಅಂಕ ಮತ್ತು 2 ಅಂಕಗಳ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನ ಮಾಡಿ, ಸರಿ ಇರುವ ಉತ್ತರಗಳಿಗೆ ಅಂಕ ನೀಡಿದ್ದಾರೆ. ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿರುವ ಅಂಕ ನಮೂದಿಸುವ ಜಾಗದಲ್ಲಿ ಅಂಕಗಳನ್ನು ದಾಖಲಿಸಿದ್ದಾರೆ. ವಿದ್ಯಾರ್ಥಿ ಒಟ್ಟು 23 ಅಂಕ ಪಡೆದುಕೊಂಡಿರುವುದಾಗಿ ದಾಖಲಿಸಿದ್ದಾರೆ.

ಸಹಾಯಕ ಮೌಲ್ಯಮಾಪಕರ ಕಾರ್ಯವನ್ನು ಪರಿಶೀಲಿಸಿದ ಉಪ ಮುಖ್ಯಮೌಲ್ಯಮಾಪಕರು ಸಹ ತಮ್ಮ ಹಸ್ತಾಕ್ಷರ ಹಾಕಿದ್ದಾರೆ. 6 ಮತ್ತು 7ನೇ ಪುಟಗಳು ಖಾಲಿ ಇರುವುದರಿಂದ ಗೆರೆ ಹಾಕಲಾಗಿದೆ. ಆದರೆ, ವಿದ್ಯಾರ್ಥಿ ಸಹ ಮೊದಲ ಪುಟದಲ್ಲಿ ಉತ್ತರ ಬರೆದಿರುವ ಪುಟಗಳ ಸಂಖ್ಯೆ ನಮೂದಿಸಿಲ್ಲ, ಜತೆಗೆ ಖಾಲಿ ಹಾಳೆಗಳ ನಂತರ ಉತ್ತರ ಬರೆದ ಸೂಚನೆಯನ್ನು ಸಹ ನೀಡದಿದ್ದರಿಂದ ಎಡವಟ್ಟಾಗಿದೆ.

8ನೇ ಪುಟದಿಂದ ವಿದ್ಯಾರ್ಥಿಯು 37ನೇ ಪ್ರಶ್ನೆಯಿಂದ ಬರೆದಿದ್ದು, 17ನೇ ಪುಟದಲ್ಲಿ 58 ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾನೆ. ಆದರೆ, 9 ಪುಟಗಳ ಮೌಲ್ಯಮಾಪನ ಕಾರ್ಯ ಆಗಿಲ್ಲ. ಸುಮಾರು 8 ಪ್ರಶ್ನೆಗಳನ್ನು ಸಹಾಯಕ ಮೌಲ್ಯಮಾಪಕರು ಮೌಲ್ಯಮಾಪನ ಮಾಡಿ, ಸೂಕ್ತ ಅಂಕಗಳನ್ನು ನೀಡಿಲ್ಲ. 4, 6 ಮತ್ತು 5 ಅಂಕಗಳ ಪ್ರಾಜೆಕ್ಟ್ ಅವಲಂಬಿತ 2 ಪ್ರಶ್ನೆಗಳನ್ನು ಮೌಲ್ಯಮಾಪನ ಮಾಡಲಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸುವ ವಿದ್ಯಾರ್ಥಿ ಸುಮಾರು 30 ಅಂಕಗಳಿಸುವ ಸಾಧ್ಯತೆ ಇದ್ದು, ಒಟ್ಟು 50ಕ್ಕೂ ಹೆಚ್ಚು ಅಂಕ ಪಡೆದುಕೊಳ್ಳಬಹುದಾಗಿದೆ.

ಮೌಲ್ಯಮಾಪನ ಕಾರ್ಯದ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಅರ್ಥಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ದು, ಈಗ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾನೆ. ಶೇ.70 ಫಲಿತಾಂಶ ಗಳಿಸಿದ್ದು, ಒಂದು ವಿಷಯದಲ್ಲಿ ಫೇಲ್ ಆಗಿದ್ದರಿಂದ ಪೂರಕ ಪರೀಕ್ಷೆಗೆ 200 ರೂ. ಶುಲ್ಕ ಪಾವತಿಸಿದ್ದಾನೆ. ಸ್ಕ್ಯಾನ್ ಪ್ರತಿಗೆ 500 ರೂ. ಮತ್ತು ಮರುಮೌಲ್ಯಮಾಪನಕ್ಕೆ 1600 ರೂ. ಶುಲ್ಕ ಪಾವತಿಸಿದ್ದಾನೆ.

ಅರ್ಥಶಾಸ್ತ್ರ ವಿಷಯದಲ್ಲಿ ನಾನು ಫೇಲ್ ಆಗುವಷ್ಟು ಕಡಿಮೆ ಅಂಕ ಗಳಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಶುಲ್ಕ ಪಾವತಿಸಿ ತರಿಸಿಕೊಂಡೆ. ನಕಲು ಪ್ರತಿ ಗಮನಿಸಿದಾಗ ಸುಮಾರು 9 ಪುಟಗಳ ಮೌಲ್ಯಮಾಪನ ಮಾಡದಿರುವುದು ಗಮನಕ್ಕೆ ಬಂದಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದೇನೆ. ಇದೊಂದು ವಿಷಯದಲ್ಲಿ ಮಾತ್ರ ನಾನು ಫೇಲ್ ಆಗಿದ್ದೇನೆ.
– ನೊಂದ ವಿದ್ಯಾರ್ಥಿ, ಸಾಗರ

23 ಅಂಕಗಳಿಸಿರುವ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ನಕಲು ಪ್ರತಿ ಗಮನಿಸಿದ್ದೇನೆ. ಆರಂಭದ 6 ಪುಟಗಳ ಉತ್ತರ ಮಾತ್ರ ಮೌಲ್ಯಮಾಪನ ಮಾಡಲಾಗಿದೆ. ಖಾಲಿ ಪುಟಗಳ ನಂತರ ವಿದ್ಯಾರ್ಥಿ ಉತ್ತರ ಬರೆದಿದ್ದು, ಅವುಗಳನ್ನು ಮೌಲ್ಯಮಾಪನ ಮಾಡಿಲ್ಲ. ಮೌಲ್ಯ ಮಾಪನ ಮಾಡಿದರೆ ಸುಮಾರು 30 ಅಂಕಗಳನ್ನು ನೀಡಬೇಕಾಗುತ್ತದೆ.
– ರೇಖಾ, ಅರ್ಥಶಾಸ್ತ್ರ ಉಪನ್ಯಾಸಕರು, ಸಾಗರ

ಇದನ್ನೂ ಓದಿ | ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿ ಎಂ.ಆರ್.ದೊರೆಸ್ವಾಮಿ ನೇಮಕ

Exit mobile version