ಬೆಂಗಳೂರು: ತೆಂಗಿನಮರದ ಸಸಿ ಹಾಕಿದವರು ಅದರ ಫಲ ಬರುವ ಕಾಲದಲ್ಲಿ ಇರುವುದಿಲ್ಲ. ಅವರ ಮುಂದಿನ ಪೀಳಿಗೆ ಅದರ ಫಲವನ್ನು ಸ್ವೀಕರಿಸುತ್ತಾರೆ ಎಂಬ ಮಾತಿದೆ. ಆದರೆ ಫಲವನ್ನು ಉಣ್ಣುವವರು ಆ ತೆಂಗಿನ ಸಸಿಯನ್ನು ನೆಟ್ಟ ಹಿಂದಿನ ತಲೆಮಾರನ್ನು ನೆನಪಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರ್ ರಾವ್ ಹೇಳಿದರು.
ನಗರದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಅಖಿಲ ಹವ್ಯಕ ಮಹಾಸಭೆಯ (Havyaka Awards) 80ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಹಾಗೂ ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅನೇಕ ಹಿರಿಯರ ಪ್ರಯತ್ನದ ಫಲವಾಗಿ ಹವ್ಯಕ ಮಹಾಸಭೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿ, ಈಗ ಹೆಮ್ಮರವಾಗಿ ಬೆಳದಿದೆ. ಅದರ ಫಲವನ್ನು ಈ ತಲೆಮಾರಿನವರು ಅನುಭವಿಸುತ್ತಿದ್ದೇವೆ. ಸಂಸ್ಥಾಪಕರನ್ನು ಸ್ಮರಿಸುವ ಹವ್ಯಕ ಮಹಾಸಭೆಯ ಕಾರ್ಯ ಶ್ಲಾಘನೀಯ ಎಂದ ಅವರು, ಹವ್ಯಕ ವಿಶೇಷ ಪ್ರಶಸ್ತಿಗೆ ಭಾಜನರಾದ ಎಲ್ಲರ ಸಾಧನೆ ಸಮಾಜಕ್ಕೆ ಪ್ರೇರಣೆ ಎಂದರು.
ಇದನ್ನೂ ಓದಿ | Nanjanagud : ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ವೈಭವ, ರಥೋತ್ಸವದ ಸಂಭ್ರಮ
ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ ಮಾತನಾಡಿ, ನಮ್ಮಲ್ಲಿ ಅನೇಕ ಕೃಷಿಕರು ಅನೇಕ ಸಾಧನೆಗಳನ್ನು ಮಾಡಿದವರು ಹಾಗೂ ಗ್ರಾಮೀಣ ಪ್ರತಿಭೆಗಳು ಇದ್ದು, ರಾಜ್ಯಮಟ್ಟದ ಇಂತಹ ಕಾರ್ಯಕ್ರಮಗಳ ಜತೆಗೆ ಪ್ರದೇಶಿಕ ಮಟ್ಟದಲ್ಲೂ ಅಂತಹವರನ್ನು ಸನ್ಮಾನಿಸುವ ಕಾರ್ಯವಾಗಬೇಕು. ಸಮುದಾಯದ ಬೆಳವಣಿಗೆಯ ಕಾರ್ಯದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳೋಣ ಎಂದು ತಿಳಸಿದರು.
ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ‘ಹವ್ಯಕ ವಿಶೇಷ’ ಪ್ರಶಸ್ತಿಗಳು ಅರ್ಜಿ ಹಾಕಿ ಪಡೆಯುವ ಪ್ರಶಸ್ತಿಗಳಲ್ಲ. ಸಮಾಜದಿಂದ ನಾಮನಿರ್ದೇಶನಗೊಂಡು ಆಯ್ಕೆಮಾಡುವ ಪ್ರಶಸ್ತಿ ಇದಾಗಿದೆ. ಪ್ರಶಸ್ತಿಗಳನ್ನು ನೀಡಿರುವುದು ಅವರ ಸಾಧನೆಗೆ ಸಮಾಜ ನೀಡುತ್ತಿರುವ ಗೌರವ ಮಾತ್ರವಲ್ಲದೇ, ಇದು ಯುವ ಜನಾಂಗಕ್ಕೆ ಪ್ರೇರಣೆಯೂ ಆಗಿದೆ ಎಂದು ಹೇಳಿದರು.
ಹವ್ಯಕ ಮಹಾಸಭೆ 80ನೇ ವರ್ಷದ ಸಂಸ್ಥಾಪನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ನಮ್ಮ ಪೂರ್ವಜರು ಸ್ವಾತಂತ್ರ್ಯ ಪೂರ್ವದಲ್ಲಿ ಇದನ್ನು ಸ್ಥಾಪಿಸಿರುವುದು ನಮ್ಮ ಸಮಾಜದ ಹೆಮ್ಮೆಯಾಗಿದೆ. ಈಗ ಸಮಾಜ ಸಂಘಟನೆ ಬಲಿಷ್ಠಗೊಂಡಿದ್ದು, ನಾವೆಲ್ಲ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಇನ್ನಷ್ಟು ಬಲಶಾಲಿಯಾಗಿಸೋಣ ಎಂದರು.
ಹವ್ಯಕ ಮಹಾಸಭೆಯ ಸಂಘಟನೆಯು ಪ್ರಾದೇಶಿಕ ಕೇಂದ್ರಗಳ ಮೂಲಕ ಬಲಗೊಳುತ್ತಿದ್ದು, ಪುತ್ತೂರಿನಲ್ಲಿ ಈಗಾಗಲೇ ಪ್ರಾದೇಶಿಕ ಕೇಂದ್ರ ಕಾರ್ಯಾಚರಿಸುತ್ತಿದೆ. ಸಾಗರ, ಶಿರಸಿ, ಯಲ್ಲಾಪುರ ಹಾಗೂ ಉಡುಪಿಯಲ್ಲಿ ಪ್ರಾದೇಶಿಕ ಕೇಂದ್ರವನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಮಹಾಸಭೆಯ ಕಾರ್ಯಗಳ ಕುರಿತಾಗಿ ಮಾಹಿತಿ ನೀಡಿದರು.
ಇದಕ್ಕೂ ಮೊದಲು, ಹವ್ಯಕ ವಿಭೂಷಣ, ಹವ್ಯಕ ಭೂಷಣ, ಹವ್ಯಕ ಶ್ರೀ ಹಾಗೂ ಹವ್ಯಕ ಸೇವಾಶ್ರೀ ಪ್ರಶಸ್ತಿಯನ್ನು ಆಯ್ಕೆಯಾದ ಸಾಧಕರಿಗೆ ನೀಡಿ ಮಹಾಸಭೆಯ ಗೌರವ ಸಲ್ಲಿಸಲಾಯಿತು. ಪ್ರಶಸ್ತಿ ಭಾಜನರಾದವರು ತಮ್ಮ ಜೀವನಾನುಭವಗಳನ್ನು ಹಂಚಿಕೊಂಡರು. ಹಾಗೆಯೇ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಮಕ್ಕಳಿಗೆ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ಆರ್. ಎಂ ಹೆಗಡೆ, ಶ್ರೀಧರ ಜೆ ಭಟ್ಟ ಕೆಕ್ಕಾರು, ಕಾರ್ಯದರ್ಶಿಗಳಾದ ಪ್ರಶಾಂತ ಕುಮಾರ ಜಿ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕಾರ್ಯಕ್ರಮದ ಸಂಚಾಲಕರಾದ ರವಿನಾರಾಯಣ ಪಟ್ಟಾಜೆ, ಮುಗಲೋಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಇದನ್ನೂ ಓದಿ | ಪುತ್ತೂರು ದೇವಳದಲ್ಲಿ ವಿಸ್ಮಯ: ಪುಷ್ಕರಣಿ ಕಾಯಕಲ್ಪದ ವೇಳೆ ನಿಗೂಢತೆಗಳ ಅನಾವರಣ; ವರುಣ ದೇವರ ವಿಗ್ರಹ, ಪಾಣಿಪೀಠಗಳು ಪತ್ತೆ!
ಕಾರ್ಯಕ್ರಮದ ಕೊನೆಯಲ್ಲಿ ದಿವಾಕರ ಹೆಗಡೆ ಕೆರೆಹೊಂಡ ಅವರ ‘ಪ್ರಕ್ಷುಬ್ಧ ರಾಧೇಯ’ ಏಕವ್ಯಕ್ತಿ ತಾಳಮದ್ದಲೆ ಜನಮನ ರಂಜಿಸಿತು.
ಹವ್ಯಕ ವಿಶೇಷ ಪ್ರಶಸ್ತಿ ಪುರಸ್ಕೃತರು
ಹವ್ಯಕ ವಿಭೂಷಣ ಪ್ರಶಸ್ತಿ
ಪೆರುವೋಡಿ ನಾರಾಯಣ ಭಟ್ (ತೆಂಕುತಿಟ್ಟು ಯಕ್ಷಗಾನ)
ಹವ್ಯಕ ಭೂಷಣ ಪ್ರಶಸ್ತಿ
ಡಾ.ಲಕ್ಷ್ಮೀಶ್ ಸೋಂದಾ (ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರು)
ಜಿ. ಎಸ್. ಹೆಗಡೆ ಸಪ್ತಕ (ಸಂಗೀತ ಕ್ಷೇತ್ರ)
ಹವ್ಯಕ ಶ್ರೀ ಪ್ರಶಸ್ತಿ
ಡಾ. ಕಿಶನ್ ಭಾಗವತ್ (ವೈದ್ಯಕೀಯ & ಸಾಮಾಜಿಕ ಸೇವೆ)
ಲೆ.ಕ. ವಿವೇಕ್ ಸಾಯ (ಭಾರತೀಯ ಭೂ ಸೇನಾ)
ಅರ್ಪಿತಾ. ವಿ. ಎಂ (ಕ್ರೀಡೆ)
ಹವ್ಯಕ ಸೇವಾಶ್ರೀ
ಶ್ರೀ ನಾರಾಯಣ ಶಾನಭಾಗ (ವಿಶ್ರಾಂತ ನಿರ್ದೇಶಕರು ಹವ್ಯಕ ಅಧ್ಯಯನ ಕೇಂದ್ರ)