ಕೊಡಗು ಜಿಲ್ಲೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ (MLA A.S.Ponnanna) ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರನ್ನಾಗಿ (Legal Adviser to Chief Minister) ನೇಮಕ ಮಾಡಲಾಗಿದೆ. ಇವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಲಾಗಿದೆ. ಕೊಡವ ಸಮುದಾಯದ ಎ.ಎಸ್.ಪೊನ್ನಣ್ಣನವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬ ಒತ್ತಾಯವನ್ನು ಕೊಡಗು ಜಿಲ್ಲೆಯ ಜನರು ಮಾಡಿದ್ದರು. ಆದರೆ ಸಂಪುಟ ರಚನೆ ವೇಳೆ ಪೊನ್ನಣ್ಣನವರಿಗೆ ಮಂತ್ರಿಸ್ಥಾನ ಸಿಕ್ಕಿರಲಿಲ್ಲ.
ಬಿಜೆಪಿ ಪಾಲಿಗೆ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆಯಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ, ಯಾರಿಗೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಎ.ಎಸ್.ಪೊನ್ನಣ್ಣನವರಿಗೆ ಪ್ರಮುಖ ಹುದ್ದೆಯೊಂದನ್ನು ಕೊಡಲಾಗಿದೆ. ಹೈಕೋರ್ಟ್ ಹಿರಿಯ ವಕೀಲರಾಗಿ, ಕೆಪಿಸಿಸಿ ವಕ್ತಾರರಾಗಿ, ಕಾನೂನು ಘಟಕದ ರಾಜ್ಯಾಧ್ಯಕ್ಷರಾಗಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿರುವ ಅನುಭವವ ಇರುವ ಶಾಸಕ ಎ.ಎಸ್. ಪೊನ್ನಣ್ಣ, ಇದೀಗ ಮುಖ್ಯಮಂತ್ರಿಗೆ ಕಾನೂನು ಸಲಹೆಗಾರರಾಗಿದ್ದಾರೆ.
ನಜೀರ್ ಅಹ್ಮದ್ ಸಿಎಂ ರಾಜಕೀಯ ಕಾರ್ಯದರ್ಶಿ
ಇನ್ನು ಕೋಲಾರದ ಹಿರಿಯ ಮುಸ್ಲಿಂ ಮುಖಂಡ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕಳೆದ ಮೂರು ಅವಧಿಗೆ ಪರಿಷತ್ ಸದಸ್ಯರಾಗಿ ನೇಮಕಗೊಂಡಿರುವ ನಜೀರ್ ಅಹ್ಮದ್ಗೆ ಹೊಸ ಜವಾಬ್ದಾರಿ ನೀಡಿ ಸರ್ಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚನಾಲ ಆದೇಶ ಹೊರಡಿಸಿದ್ದಾರೆ. ಇವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಸಿಗಲಿದೆ.