ಮಡಿಕೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಆ.26ಕ್ಕೆ ಕೊಡಗಿಗೆ ಬರುವುದಿದ್ದರೆ ಬರಲಿ, ನಾವೂ ಕೂಡ ಕೌಂಟರ್ ಪ್ರತಿಭಟನೆ ಮಾಡುತ್ತೇವೆ. ಅವರು ಹೊರಗಡೆಯಿಂದ ಜನರನ್ನು ಕರೆದುಕೊಂಡು ಬರುತ್ತಾರೆ, ನಾವು ಮನೆ ಮನೆಯಿಂದ ಜನರನ್ನು ಸೇರಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿರುವ ಎಲ್ಲಾ ಟಿಪ್ಪು ವಿರೋಧಿಗಳನ್ನು ಸೇರಿಸುತ್ತೇವೆ ಎಂದು ಬಿಜೆಪಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಹಿನ್ನೆಲೆಯಲ್ಲಿ ಆ.26 ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದವರು, ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತಾಡಬೇಕು. ಬಹಳ ಸಣ್ಣ ರಾಜಕಾರಣಿ ಮಾತನಾಡಿದ ಹಾಗೆ ಅವರು ಮಾತನಾಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರೆ ಸಿಎಂ ಓಡಾಡಲು ಕಷ್ಟವಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಗ್ಗೆ ಕಿಡಿ ಕಾರಿದರು.
40 ಪರ್ಸೆಂಟೇಜ್ ಲೂಟಿ ಪ್ರಶ್ನಿಸಿದ್ದಕ್ಕೆ ಕೊಡಗಿಗೆ ಬಂದಾಗ ತಡೆಯುವ ಯತ್ನವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ತಾಕತ್ತಿದ್ದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆ ಮಾಡಿಸಲಿ. ಪರ್ಸೆಂಟೇಜ್ ನಾವು ಕಲಿತಿದ್ದೇ ಕಾಂಗ್ರೆಸ್‌ನವರು ಹೇಳಿದ್ದರಿಂದ, ಅಪ್ಪಚ್ಚು ರಂಜನ್‌ಗೆ ಯಾರಾದರೂ ಪರ್ಸೆಂಟೇಜ್ ಕೊಟ್ಟಿದ್ದರೆ ಹೇಳಲಿ. ಒಂದು ವೇಳೆ ಯಾರಾದರೂ ಹೇಳಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ಕರ್ನಾಟಕದಲ್ಲಿ ಶಾಸಕರೊಬ್ಬರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರೆ ಅದು ನಾನು ಮಾತ್ರ. ಸಿದ್ದರಾಮಯ್ಯ ನಮ್ಮನ್ನು ಕಡಿಮೆ ಅಂದಾಜು ಮಾಡುವುದು ಬೇಡ. ಚಾಲೆಂಜ್ ಮಾಡುತ್ತೇನೆ, ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಲೋಕಾಯುಕ್ತದಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ಗೆ ನಾಯಿಗಳು ವೆಲ್‌ಕಮ್ ಮಾಡುತ್ತವೆ
ಮಡಿಕೇರಿಯಲ್ಲಿ ಆ.26ರಂದು ಕಾಂಗ್ರೆಸ್ ಪ್ರತಿಭಟನೆ ವೇಳೆ ನಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ. ಮನೆಗೆ ಬರುವುದಿದ್ದರೆ ಬರಲಿ ಅವರಿಗೆ ಮೋಸ್ಟ್ ವೆಲ್‌ಕಮ್, ಆದರೆ ಅವರನ್ನು ನಮ್ಮ ಮನೆಯ ನಾಯಿಗಳು ವೆಲ್‌ಕಮ್ ಮಾಡುತ್ತವೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ತಿರುಗೇಟು ನೀಡಿದ್ದಾರೆ.
ಕೊಡಗು ಬೋಪಯ್ಯರ ಅಪ್ಪಂದಾ ಎಂಬ ಕೆಪಿಸಿಸಿ ವಕ್ತಾರ ಲಕ್ಷ್ಮಣ ಹೇಳಿಕೆಗೆ ಪ್ರತಿಕ್ರಿಯಿಸಿ, ಲಕ್ಷ್ಮಣ್ ಯಾರು ಎಂದು ಇಡೀ ಲೋಕಕ್ಕೆ ಗೊತ್ತಿದೆ. ಪ್ರತಿಭಟನೆ ಮಾಡಿ ಜನ ಸೇರಿಸಿ ವಾತಾವರಣ ಹಾಳು ಮಾಡಲು ನಾವು ಬಿಡುವುದಿಲ್ಲ. ಹಾಗೆ ಮಾಡಲು ಮುಂದಾದರೆ ನಾವು ಅದಕ್ಕೆ ತಕ್ಕ ಪ್ರತಿಕ್ರಿಯೆ ಕೊಡುತ್ತೇವೆ ಎಂದಿದ್ದೆ. ಆ ವಿಚಾರಕ್ಕೆ ಅಸಭ್ಯ ಪದ ಬಳಕೆ ಅವರ ಸಂಸ್ಕೃತಿ, ನಾವು ಆ ಸಂಸ್ಕೃತಿಯಲ್ಲಿ ಬೆಳೆದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Congress Protest | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ; ರಾಜ್ಯಾದ್ಯಂತ ಭುಗಿಲೆದ್ದ ಕೈ ಕಾರ್ಯಕರ್ತರ ಆಕ್ರೋಶ