Site icon Vistara News

BY Vijayendra: ಧರಣಿ ಕುಳಿತ ಶಾಸಕ ಬಿ.ವೈ. ವಿಜಯೇಂದ್ರ! ತಾರಕಕ್ಕೇರಿದ ಮರ ಸಾಗಾಟ ಗಲಾಟೆ

MLA BY VIJAYENDRA protest in shikaripura

ಶಿಕಾರಿಪುರ: ದೇವಸ್ಥಾನ ರಥವನ್ನು (Temple Chariot) ನಿರ್ಮಾಣ ಮಾಡಲು ಪರವಾನಗಿಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಅದನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಜನರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆ. ಮಳೆಯಿಂದ ಮರಗಳು ಹಾಳಾಗುತ್ತವೆ ಎಂಬ ಹಿನ್ನೆಲೆಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ಹೇಳಿದರೂ ತೊಂದರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ತಾಲೂಕಿನ ಸುರಗಿಹಳ್ಳಿ ಗ್ರಾಮದ ಆಂಜನೇಯ ರಥ ನಿರ್ಮಾಣಕ್ಕೆ ಮರ ಕಡಿಯಲು ವರ್ಷದ ಹಿಂದೆಯೇ ಅನುಮತಿ ನೀಡಲಾಗಿತ್ತು. ಆದರೆ, ಅವುಗಳನ್ನು ಅಲ್ಲಿಂದ ಸಾಗಿಸಲು ಅನುಮತಿ ನೀಡದೇ ನಿರ್ಲಕ್ಷಿಸಲಾಗಿತ್ತು. ಮರಗಳು ಮಳೆಯಿಂದ ಹಾಳಾಗುವುದನ್ನು ತಪ್ಪಿಸಲು ದೇವಸ್ಥಾನ ಸಮಿತಿಯವರು ಬೇರೆಡೆ ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ ಎಂದು ಶಾಸಕ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶಿಕಾರಿಪುರದ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆಯನ್ನು ನಡೆಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ

ಇದನ್ನೂ ಓದಿ: Moral Policing: ಆ್ಯಂಟಿ ಕಮ್ಯುನಲ್ ವಿಂಗ್‌ಗೆ ಬಿಜೆಪಿ ಠಕ್ಕರ್:‌ ಹೆಲ್ಪ್‌ಲೈನ್‌ಗೆ ಕಾಲ್‌ ಮಾಡಿದ್ರೆ ಬರ್ತಾರೆ 100 ಲಾಯರ್!

ಅಮಾನತಿಗೆ ವಿಜಯೇಂದ್ರ ಆಗ್ರಹ

ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ರೈತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ವಿಷಯದ ಸತ್ಯಾಸತ್ಯತೆಯನ್ನು ತಿಳಿದು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಬೇಕಿತ್ತು. ಈ ಪ್ರಕರಣದಲ್ಲಿ ಅವರ ತಪ್ಪುಗಳು ಎದ್ದು ಕಾಣುತ್ತಿವೆ. ಮರ ಕಡಿಯಲು ಪರವಾನಿಗೆ ಕೊಟ್ಟು ಅದನ್ನು ಸಾಗಿಸಲು ಅನುಮತಿ ನೀಡದೇ ಇದ್ದರೆ ಹೇಗೆ? ಈ ವಿಷಯ ನನ್ನ ಗಮನಕ್ಕೆ ಬಂದ ಕೂಡಲೇ ಹಲ್ಲೆ ನಡೆಸಿರುವ ಅಧಿಕಾರಿಗಳನ್ನು ಅಮಾನತು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಅವರನ್ನು ತಕ್ಷಣ ಅಮಾನತು ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮತ್ತೆ ಘಟನೆ ಮರುಕಳಿಸದಂತೆ ಶಾಸಕರ ಎಚ್ಚರಿಕೆ

ತಾಲೂಕಿನ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯೂ ಸೇರಿದಂತೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸಂಯಮದಿಂದ ಅಧಿಕಾರಿಗಳು ವರ್ತಿಸಬೇಕು. ಈ ರೀತಿಯ ಯಾವುದೇ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಬಿ.ವೈ. ವಿಜಯೇಂದ್ರ ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: Free Bus: ನಾಳೆ ಮಹಿಳೆಯರಿಗೆ ಬರಲಿದೆ ʼಶಕ್ತಿʼ; ಉಚಿತ ಸಂಚಾರಕ್ಕೆ ಇರಲಿ ಈ ದಾಖಲೆ, ಸ್ಮಾರ್ಟ್‌ಕಾರ್ಡ್‌ ಸಿಗೋದು ಯಾವಾಗ?

ಈ ಪ್ರತಿಭಟನೆಯಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ತಾಲೂಕಿನ ಬಿಜೆಪಿ ಮುಖಂಡರು, ಸ್ಥಳೀಯ ಕಾರ್ಯಕರ್ತರು ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

Exit mobile version