Site icon Vistara News

Koppala News: ಜೆಜೆಎಂ ಕಾಮಗಾರಿ ಬೋಗಸ್ ಮಾಡಿದವರ ವಿರುದ್ಧ ಎಫ್ಐಆರ್: ಶಾಸಕ ಜನಾರ್ದನರೆಡ್ಡಿ

MLA Janardhana Reddy latest statement at Gangavathi

ಗಂಗಾವತಿ: ಕೇಂದ್ರ ಸರ್ಕಾರದ (Central Government) ಜಲಜೀವನ ಮಿಷನ್ ಯೋಜನೆಯಡಿ (JJM) ಕಳಪೆ ಕಾಮಗಾರಿ ಮಾಡಿದ ಮತ್ತು ಬೋಗಸ್ ಬಿಲ್ ಎತ್ತಿದ ಗುತ್ತಿಗೆದಾರರ ವಿರುದ್ಧ ಮತ್ತು ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ಎಫ್ಐಆರ್ (FIR) ದಾಖಲಿಸಲಾಗುವುದು ಎಂದು ಶಾಸಕ ಜಿ. ಜನಾರ್ದನರೆಡ್ಡಿ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜೆಜೆಎಂ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಗಂಗಾವತಿ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿರುವದ ಬಗ್ಗೆ ವ್ಯಾಪಕ ದೂರುಗಳಿವೆ.

ಚುನಾವಣೆಯ ಪೂರ್ವದಲ್ಲಿ ನಾನು ಸಂಚರಿಸಿದ ಪ್ರತಿ ಗ್ರಾಮಗಳಲ್ಲಿ ನಡೆದ ಜೆಜೆಎಂ ಕಾಮಗಾರಿಯ ಇಂಚಿಂಚು ಮಾಹಿತಿಯನ್ನು ವಿಡಿಯೋ ಸಮೇತ ಚಿತ್ರೀಕರಣ ಮಾಡಿಕೊಂಡಿದ್ದು, ಇದರ ಪೂರ್ಣ ಮಾಹಿತಿ ನನಗಿದೆ.

ಇದನ್ನೂ ಓದಿ: Aditya L1 Mission: ಸೂರ್ಯನೆಡೆ ನಮ್ಮ ನಡೆ; ನಾಳೆ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ; ಇಲ್ಲಿ ವೀಕ್ಷಿಸಿ!

ಹೀಗಾಗಿ ಕಳೆದ ಮೂರು ತಿಂಗಳ ಹಿಂದೆಯೇ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಇಂದು ಸಭೆ ಕರೆಯಲಾಗಿದೆ. ಸಂಬಂಧಿತ ಅಧಿಕಾರಿಗಳು, ಪಿಡಿಒ ಮತ್ತು ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಮೊದಲ ಹಂತದಲ್ಲಿ ಗುತ್ತಿಗೆದಾರರಿಂದ ಕಾಮಗಾರಿಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಗಡವು ನೀಡಲಾಗುವುದು. ಕಾಮಗಾರಿ ಪ್ರಮಾಣ ಮತ್ತು ಸ್ವರೂಪ ಆಧಾರಿಸಿ ಎರಡು ದಿನದಿಂದ ಹದಿನೈದು ದಿನದ ಕಾಲವಕಾಶ ನೀಡಲಾಗುವುದು.

ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗುವುದು. ಬಳಿಕ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ನನ್ನ ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿಗಳಾಗಬೇಕು ಎನ್ನುವುದು ನನ್ನ ಉದ್ದೇಶ ಎಂದು ತಿಳಿಸಿದರು.

ತಮ್ಮ ಮೇಲೆ ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್‌ ರೆಡ್ಡಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಶಾಸಕ ಜನಾರ್ದನ ರೆಡ್ಡಿ, ಈಗಾಗಲೆ ಭರತ್‌ ರೆಡ್ಡಿ ಅವರ ಹೇಳಿಕೆಗೆ ನಮ್ಮ ಪಕ್ಷದ ಕಾರ್ಯಕರ್ತರು ಸರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Koppala News: ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಯುವ ಉತ್ಸವಕ್ಕೆ ಚಾಲನೆ

ಅವರ ಹೇಳಿಕೆಗೆ ಯಾರು ಪ್ರತಿಕ್ರಿಯೆ ನೀಡಬೇಕಿತ್ತೋ ಅವರು ನೀಡಿದ್ದಾರೆ. ನಾವು ಕೇವಲ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆ ಮಾಡೋಣ. ಯಾರೋ ಏನೋ ಮಾತನಾಡುತ್ತಾರೆಂದು ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ತಿಳಿಸಿದರು.

Exit mobile version