ತುಮಕೂರು: ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ (Karnataka Congress Government) ಇಡೀ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಅನುದಾನ ತಡೆ ಹಿಡಿದಿದೆ. ನನ್ನ ಕ್ಷೇತ್ರದ 20 ಕೋಟಿ ರೂಪಾಯಿ ಅನುದಾನವನ್ನು ಮತ್ತು ಸಿದ್ಧಗಂಗಾ ಮಠಕ್ಕೆ ಬಿಜೆಪಿ ಸರ್ಕಾರದಿಂದ ಬರುತ್ತಿದ್ದ 10 ಕೋಟಿ ರೂಪಾಯಿ ಅನುದಾನ ತಡೆದಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಆರೋಪಿಸಿದ್ದಾರೆ. ಅವರಿಂದು ತಾಲೂಕು ಪಂಚಾಯಿತಿಯಲ್ಲಿ, ಕಾರ್ಯಾಲಯ ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇಡೀ ರಾಜ್ಯಾದ್ಯಂತ ಒಟ್ಟು 20 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಈಗಿನ ಸರ್ಕಾರ ತಡೆ ಹಿಡಿದಿದೆ. ಸಿದ್ಧಗಂಗಾ ಮಠಕ್ಕೆ ಬರುತ್ತಿದ್ದ ಅನುದಾನವನ್ನೂ ಕೊಡುತ್ತಿಲ್ಲ. ಮಠಕ್ಕೆ ಅನುದಾನ ತಡೆಯುವ ಧಮ್ಮು ಯಾವ ಪಕ್ಷಗಳಿಗೂ ಇಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಎಲ್ಲರೂ ಈ ಮಠಕ್ಕೆ ಬಂದು ಸ್ವಾಮೀಜಿ ಆಶೀರ್ವಾದ ಪಡೆಯುತ್ತಾರೆ. ನೋಡೋಣ ಸ್ವಲ್ಪ ದಿನ ಕಾಯುತ್ತೇವೆ. ಹೊಸ ಸರ್ಕಾರ ಬಂದಿದೆ. ಮಂತ್ರಿಗಳೂ ಹೊಸಬರು. ಅಲ್ಲಿ ಪರಿಶೀಲನೆ ನಡೆಸಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದಿಟ್ಟುಕೊಳ್ಳೋಣ. ಆದರೆ ಶಾಶ್ವತವಾಗಿ ಏನಾದರೂ ಅನುದಾನ ತಡೆ ಹಿಡಿದಿದ್ದೇ ಆದಲ್ಲಿ ಪ್ರಶ್ನೆ ಮಾಡುತ್ತೇವೆ. ಕೆಡಿಪಿ ಸಭೆಗಳಲ್ಲಿ ಪ್ರಸ್ತಾಪ ಮಾಡುತ್ತೇವೆ. ಆದರೂ ಸಾಧ್ಯವಾಗದೆ ಇದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ. ಏನೋ ಹಣವನ್ನು ದುರುದ್ದೇಶಕ್ಕೆ ಬಳಸುತ್ತಿದ್ದೇವೆ ಎಂದರೆ ತಡೆ ಹಿಡಿಯಲಿ, ಅದು ಬಿಟ್ಟು ಸುಮ್ಮನೆ ಹಣ ಕಡಿತ ಮಾಡಿದರೆ ಸುಮ್ಮನೆ ಇರುವುದಿಲ್ಲ’ ಎಂದು ಶಾಸಕರು ಹೇಳಿದ್ದಾರೆ. ಅಷ್ಟೇ ಅಲ್ಲ, ಮಠಕ್ಕೆ ಅನುದಾನವನ್ನು ನೀಡೇನೀಡುತ್ತಾರೆ ಎಂಬ ವಿಶ್ವಾಸ ಇರುವುದಾಗಿಯೂ ತಿಳಿಸಿದರು.
ಇದನ್ನೂ ಓದಿ: RSS: ಸರ್ಕಾರಿ-ಅನುದಾನಿತ ಶಾಲೆ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧ?: ಕಾಂಗ್ರೆಸ್ ಹೇಳಿದ್ದೇನು?
ಕಾಂಗ್ರೆಸ್ನವರಿಗೆ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಯಾವುದೇ ಹೋರಾಟ ಮಾಡಿ ಗೆಲ್ಲುವ ತಾಕತ್ತು ಇರಲಿಲ್ಲ. ಹೀಗಾಗಿ ಮುಗ್ಧ ಮತದಾರರಿಗೆ ಗ್ಯಾರಂಟಿಗಳ ಭರವಸೆ ಕೊಟ್ಟು, ಹಿಂಬಾಗಿಲಿನಿಂದ ಗೆದ್ದಿದ್ದಾರೆ. ಸಿದ್ದರಾಮಯ್ಯನವರೇ ಹೇಳಿದ್ದಾರೆ, 200 ಯೂನಿಟ್ವರೆಗೆ ಕರೆಂಟ್ ಬಿಲ್ ಇರಲ್ಲವೆಂದು. ನಾನೂ ಕರೆಂಟ್ ಬಿಲ್ ಕಟ್ಟಲ್ಲ. ನಮ್ಮ ಯಾವ ಕಾರ್ಯಕರ್ತರೂ ಕಟ್ಟುವುದಿಲ್ಲ. ಮನೆ ಯಜಮಾನಿಗೆ 2 ಸಾವಿರ ರೂಪಾಯಿ ಹಣ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈಗ, ಮನೆಯಲ್ಲಿ ಸೊಸೆ ಅಕೌಂಟ್ಗೆ ಹಣ ಹಾಕಬೇಕೋ, ಅತ್ತೆ ಅಕೌಂಟ್ಗೆ ಹಣ ಹಾಕಬೇಕೋ ಎಂಬ ಗೊಂದಲ ಶುರುವಾಗಿದೆ. ಏನೇ ಇರಲಿ ಲೋಕಸಭಾ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಚಿಕ್ಕಮಗಳೂರಲ್ಲಿ ಪ್ರತಿಭಟನೆ
ಇನ್ನು ಚಿಕ್ಕಮಗಳೂರಲ್ಲೂ ಕೂಡ ಅನುದಾನ ಕಡಿತ ವಿಚಾರಕ್ಕೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಜಿಲ್ಲೆಯಲ್ಲಿ ಸಮುದಾಯ ಭವನ ಸೇರಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಜೆಪಿಯ ನೂರಾರು ಕಾರ್ಯಕರ್ತರು ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನೆ ನಡೆಸಿದರು. ಅನುದಾನ ಬಿಡುಗಡೆಗಾಗಿ ಆಗ್ರಹಿಸಿದರು.