Site icon Vistara News

NHM Protest : ಪ್ರತಿಭಟನಾನಿರತ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರಿಗೆ 5000 ಪ್ಯಾಕೆಟ್‌ ಆಹಾರ ನೀಡಿದ ಟಿ.ಎ ಶರವಣ

NHM protest

#image_title

ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಳಪಡುವ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM Protest) ಒಳಗುತ್ತಿಗೆ ನೌಕರರು ಕಳೆದ ಫೆಬ್ರವರಿ ೧೩ರಿಂದ ನೌಕರಿ ಕಾಯಂಗೊಳಿಸುವಂತೆ ಮತ್ತು ವೇತನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ ಬಳಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ನೌಕರರು ಭಾಗವಹಿಸಿದ್ದಾರೆ. ಇವರ ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವ ವಿಧಾನಪರಿಷತ್‌ ಸದಸ್ಯರಾದ ಟಿ.ಎ ಶರವಣ ಅವರು ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕ ವರ್ಗದವರಿಗೆ ೫೦೦೦ ಪೊಟ್ಟಣ ಆಹಾರ ನೀಡಿದರು. ಟಿ.ಎ. ಶರವಣ ಅವರು ವಿಧಾನ ಪರಿಷತ್‌ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು.

ಎನ್‌ಎಚ್‌ಎಂ ನೌಕರರು ಪ್ರತಿಭಟನೆ ನಡೆಸುತ್ತಿರುವ ಫ್ರೀಡಂ ಪಾರ್ಕ್‌ಗೆ ಶರವಣ ಭೇಟಿ ನೀಡಿ ಆಹಾರ ಪೊಟ್ಟಣ ವಿತರಿಸಿದರು.

ಏನಿದು ಪ್ರತಿಭಟನೆ?

ಮಣಿಪುರ, ಒಡಿಶಾ, ರಾಜಸ್ಥಾನ, ಪಂಜಾಬ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ನೌಕರರನ್ನು ಕಾಯಂ ಮಾಡಲಾಗುತ್ತಿದೆ. ರಾಜ್ಯದಲ್ಲೂ ಈ ಕೆಲಸ ಮಾಡಬೇಕು. ಎನ್‌ಎಚ್‌ಎಂ ನೌಕರರು ಮಳೆ ಬಿಸಿಲು ಎನ್ನದೆ ಕೊರೊನಾ ಕಾಲದಲ್ಲೂ ಸೇವೆ ಮಾಡಿದ್ದರು. ಈ ನೀಡುತ್ತಿರುವ ಕಡಿಮೆ ವೇತನದಲ್ಲಿ ಅವರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕವಾಗಿರುವ ಒಳಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಿ ಅವರ ಹುದ್ದೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

ವಿಧಾನಸಭೆಯಲ್ಲಿ ಸಚಿವ ಸುಧಾಕರ್‌ ಹೇಳಿದ್ದೇನು?

ರಾಷ್ಟ್ರೀಯ ಆರೋಗ್ಯ ಅಭಿಯಾನದ ಒಳಗುತ್ತಿಗೆ ನೌಕರರ ಪ್ರತಿಭಟನೆ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು, ಎನ್‌ಎಚ್‌ಎಂ ಅಡಿ ಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ವೇತನವನ್ನು ಶೇಕಡಾ ೧೫ರಷ್ಟು ಹೆಚ್ಚಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ. ಹೊರಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ವಂಚನೆ ನಡೆಯುತ್ತಿದೆ ಎಂದು ಶಾಸಕಿ ಪೂರ್ಣಿಮಾ ಗಮನ ಸೆಳೆದಿದ್ದರು.

ಎನ್ಎಚ್‌ಎಂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸೀಮಿತವಾಗಿ ಈ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ. ಹೊರಗುತ್ತಿಗೆಯಲ್ಲಿರುವ ೩,೪೯೪ ಸಿಬ್ಬಂದಿಯನ್ನು ನೇರ ಗುತ್ತಿಗೆಗೆ ತರಲು ಕ್ರಮ ಕೈಗೊಳ್ಳಲಾಗುವುದು. ಆದರೆ, ಸೇವೆ ಕಾಯಂ ಮಾಡುವುದು ಅಸಾಧ್ಯ ಎಂದು ಹೇಳಿದ್ದರು ಸಚಿವ ಡಾ. ಕೆ. ಸುಧಾಕರ್‌.

ಇದನ್ನೂ ಓದಿ : Old Pension: ಹಳೇ ಪಿಂಚಣಿಗಾಗಿ ನಿವೃತ್ತ ಶಿಕ್ಷಕ ಆತ್ಮಹತ್ಯೆ, ಬಾದಾಮಿಯಲ್ಲಿ ಶವವಿಟ್ಟು ಪ್ರತಿಭಟನೆ; ಸರ್ಕಾರಿ ಕೊಲೆ ಎಂದ ಸಿದ್ದರಾಮಯ್ಯ

Exit mobile version