Site icon Vistara News

Model School | ಅಜ್ಜರಣಿ ಸ.ಹಿ.ಪ್ರಾ.ಶಾಲೆಯಲ್ಲಿ ಕೃಷಿ ಪಾಠ; ಆವರಣದಲ್ಲಿದೆ ತರಕಾರಿ ತೋಟ, ಇದರಿಂದಲೇ ಇಲ್ಲಿ ಬಿಸಿಯೂಟ!

Ajjarani School Mid-day meal Agriculture Lessons

ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ಇದು ಬರಿ ಪಾಠ ಶಾಲೆಯಲ್ಲ. ಇಲ್ಲಿ ವಿದ್ಯಾರ್ಥಿಗಳಿಗೆ ಪಠ್ಯವನ್ನಷ್ಟೇ ಹೇಳಿಕೊಡುವುದಿಲ್ಲ. ಬದಲಿಗೆ ಕೃಷಿಯ ಪಾಠವನ್ನೂ‌ ಮಾಡಲಾಗುತ್ತದೆ. ಪರಿಸರದ ಒಡನಾಟವನ್ನು ಮಕ್ಕಳಲ್ಲಿ‌ ಬಿತ್ತಲಾಗ್ತಿದೆ. ತಾವೇ ಸ್ವತಃ ಬೆಳೆದ ತರಕಾರಿ-ಸೊಪ್ಪಿನ ಬಿಸಿಯೂಟ ಸೇವಿಸುವ ಇಲ್ಲಿನ ವಿದ್ಯಾರ್ಥಿಗಳು‌ ನಿಜಕ್ಕೂ‌ ಇತರರಿಗೆ ಮಾದರಿ (Model School) ಆಗಿದ್ದಾರೆ.

ಕೈತೋಟ ಮಾಡಿ ಇತರರಿಗೆ ಮಾದರಿಯಾದವರು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಅಜ್ಜರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಅಜ್ಜರಣಿ ಎಂಬ ಪುಟ್ಟ ಹಳ್ಳಿಯ ಮಕ್ಕಳು ತರಕಾರಿ ಹೆಸರನ್ನು ಕೇಳಿದರೆ ಪಟಪಟನೆ ಹೇಳಬಲ್ಲರು. ಅಜ್ಜರಣಿ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯದ ಪಾಠ ಮಾಡುವ ಜತೆ ಜೀವನ ಪಾಠವನ್ನು ಕಲಿಸುತ್ತಿದ್ದಾರೆ. ಶಾಲೆಯಂಗಳದಲ್ಲಿ ತರಕಾರಿ ಬೆಳೆಸುತ್ತ, ಮಕ್ಕಳಿಗೆ ಮನುಷ್ಯ ಹಾಗೂ ಮಣ್ಣಿನ ಸಂಬಂಧವನ್ನು ತಿಳಿಸುತ್ತಿದ್ದಾರೆ. ತರಕಾರಿ ಕೈತೋಟ ರಚಿಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿದೆ.

ಒಟ್ಟು 76 ಮಕ್ಕಳಿರುವ ಶಾಲೆಯಲ್ಲಿ ಐವರು ಶಿಕ್ಷಕರಿದ್ದಾರೆ. ಶೈಕ್ಷಣಿಕ ಚಟುವಟಿಕೆಯಲ್ಲಿ ಹಲವು ಸಾಧನೆ ಮಾಡಿದ ಕೀರ್ತಿ ಈ ಶಾಲೆಗೆ ಸಂದಿದೆ. ಆದರೆ, ಬಿಡುವಿನ ವೇಳೆಯಲ್ಲಿ ಶಿಕ್ಷಕರು, ಮಕ್ಕಳು ಸೇರಿ ಕೈತೋಟದಲ್ಲಿ ಬೆಳೆಸಿದ ತರಕಾರಿ ಆರೈಕೆ ಮಾಡ್ತಾರೆ. ಮಕ್ಕಳು ಗಿಡಗಳಿಗೆ ನೀರು ಹಾಯಿಸಿ, ತರಕಾರಿ ಬೆಳವಣಿಗೆಯ ಹಂತವನ್ನು ಕುತೂಹದಿಂದ ನೋಡ್ತಾರೆ. ಮಳೆಗಾಲದಲ್ಲಿ ಬೀನ್ಸ್, ಮೂಲಂಗಿ, ಸೌತೆ, ಹೀರೆ, ಬದನೆ ಬೆಳೆದರೆ, ಚಳಿಗಾಲದಲ್ಲಿ ಹರಿವೆ, ಟೊಮೇಟೊ, ಪಾಲಕ್‌ ಸೊಪ್ಪು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಹಸಿಮೆಣಸು, ಬೆಂಡೆಕಾಯಿ, ಬದನೆ, ಮೂಲಂಗಿ ಮೊದಲಾದ ಹಂಗಾಮಿಗೆ ಹೊಂದಾಣಿಕೆಯಾಗುವ ತರಕಾರಿ ಬೆಳೆಯುತ್ತಾರೆ. ಶಿಕ್ಷಕರು ಮಕ್ಕಳೊಂದಿಗೆ ಸೇರಿ‌ ತರಕಾರಿ ಪಾಲನೆ ಪೋಷಣೆ ಮಾಡಿ ಬಿಸಿಯೂಟಕ್ಕೆ ತಾವು ಬೆಳೆದ ತರಕಾರಿಯನ್ನೇ ಬಳಸುವುದು ಇಲ್ಲಿನ ವಿಶೇಷ.

ಇದನ್ನೂ ಓದಿ | Xiaomi Job cuts | ಶೇ.15ರಷ್ಟು ಉದ್ಯೋಗ ಕಡಿತ ಮಾಡಿದ ಸ್ಮಾರ್ಟ್‌ಫೋನ್ ಕಂಪನಿ ಶವೊಮಿ?

ಶ್ರಮಕ್ಕೆ ಖಂಡಿತವಾಗಿಯೂ ತಕ್ಕ ಪ್ರತಿಫಲ ಇದ್ದೇ ಇರುತ್ತೆ. ಆದರೆ, ಅದಕ್ಕೆ ಗುರಿ, ಛಲ, ಹಠ ಹಾಗೂ ಸಾಧನೆ ಮುಖ್ಯವಾಗಿರತ್ತದೆ. ಇದೇ ರೀತಿಯ ಗುರಿ, ಹಠ ಹಾಗೂ ಛಲದಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಪೌಷ್ಟಿಕ ಕೈತೋಟವನ್ನು ನಿರ್ಮಿಸಿದ್ದು, ಈ ತೋಟದಲ್ಲಿ ತಾವೇ ಬೆಳೆದ ತರಕಾರಿಯಿಂದ ಬಿಸಿಯೂಟ ಸಿದ್ಧಪಡಿಸಿ ಆಹಾರ ಸೇವನೆ ಮಾಡುತ್ತಾರೆ. ಪಂಜರಗಡ್ಡೆ, ಕರಿಬೇವು, ನೆಲನೆಲ್ಲಿ, ತುಳಸಿ, ಸಾಂಬಾರಸೊಪ್ಪು, ಅಲೊವೇರಾದಂತಹ ಔಷಧ ಸಸ್ಯಗಳೂ ಈ ತರಕಾರಿ ಉದ್ಯಾನದಲ್ಲಿವೆ. ಶಾಲೆಯ ಆವರಣದಲ್ಲಿ ತೆಂಗು, ಅಡಕೆ, ನುಗ್ಗೆ ಮರಗಳಿವೆ. ಇನ್ನು ಶಾಲೆಗೆ ಬರುವ ವೇಳೆಯ ಮುಂಚಿತವಾಗಿಯೇ ಬರುವ ವಿದ್ಯಾರ್ಥಿಗಳು ಸಾವಯವ ಗೊಬ್ಬರ, ನೀರನ್ನು ಹಾಕಿ‌ ಪೋಷಣೆ ಮಾಡುತ್ತಾರೆ‌. ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ಅರ್ಧದಷ್ಟು ತರಕಾರಿಗಳನ್ನು ಇಲ್ಲಿಯೇ ಬೆಳೆಸುತ್ತೇವೆ. ನಾವೇ ಬೆಳೆಸಿದ ತರಕಾರಿ ಅಡುಗೆ ಮಾಡಿ ಊಟ ಮಾಡುತ್ತೇವೆ ಎಂದು ಹೇಳುತ್ತಾರೆ ವಿದ್ಯಾರ್ಥಿಗಳು.…

ಶಾಲಾಭಿವೃದ್ಧಿ ಸಮಿತಿಯ ಪ್ರಮುಖರು, ಗ್ರಾಮಸ್ಥರು ಎಲ್ಲ ಶಿಕ್ಷಕರ ಸಹಕಾರ ಮನೋಭಾವದಿಂದ ಇವೆಲ್ಲ ಸಾಧ್ಯವಾಗಿದೆ. ಶಿಕ್ಷಣ ಇಲಾಖೆಯ ಪ್ರಮುಖರ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ. ಅಕ್ಷರ ದಾಸೋಹಕ್ಕೆ ನಾವೇ ಬೆಳೆದ ತರಕಾರಿ-ಸೊಪ್ಪಿನಿಂದ ಅರ್ಧದಷ್ಟು ಹಣ ಉಳಿಯತ್ತದೆ.
| ಪಂಡಿತ್ ವೈ. ಪೋಟೆ, ಮುಖ್ಯ ಶಿಕ್ಷಕ

ಇದನ್ನೂ ಓದಿ | Murugha Seer | ಮಠಾಧೀಶರ ಸಮಾಗಮ; ಮುರುಘಾ ಮಠದ ಆಡಳಿತಾಧಿಕಾರಿ ನೇಮಕ ವಾಪಸ್‌ ಪಡೆಯಲು ಆಗ್ರಹ

Exit mobile version