Site icon Vistara News

Modi in Bengaluru | ಸಮಾವೇಶದಲ್ಲಿ ಚಿಕ್ಕಿಗೆ ಮುಗಿಬಿದ್ದ ಕಾರ್ಯಕರ್ತರು: ನಂಗೆ ಎಲ್ಲಿ ಎಂದು ಅಜ್ಜಿಯ ಆಕ್ರೋಶ

modi chikki

ಬೆಂಗಳೂರು: ಕೆಂಪೇಗೌಡರ ೧೦೮ ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆ ಅನಾವರಣದ ಬಳಿಕ ದೇವನಹಳ್ಳಿ ಸಮೀಪದ ಭುವನಹಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಸುಮಾರು ಮೂರು ಲಕ್ಷ ಮಂದಿ ಭಾಗವಹಿಸಿದ್ದ ಕಾರ್ಯಕ್ರಮವಿದು.

ಈ ಕಾರ್ಯಕ್ರಮಕ್ಕೆ ಹಲವು ಜಿಲ್ಲೆಗಳಿಂದ ಕಾರ್ಯಕರ್ತರು ಬಂದಿದ್ದರು. ಅವರಿಗಾಗಿ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಇತ್ತು. ಈ ನಡುವೆ ಮಜ್ಜಿಗೆ ಮತ್ತು ಚಿಕ್ಕಿ ಕೂಡಾ ವಿತರಿಸಲಾಗಿತ್ತು.
ಅಚ್ಚರಿ ಎಂದರೆ ಜನರಿಗೆ ಹಂಚಲೆಂದು ದೊಡ್ಡ ಪ್ರಮಾಣದಲ್ಲಿ ಚಿಕ್ಕಿಯನ್ನು ತರಲಾಗಿದ್ದರೂ ಕೆಲವರಿಗೆ ಕೊಟ್ಟು ಅಲ್ಲೇ ನಿಲ್ಲಿಸಲಾಗಿತ್ತು. ಹೀಗಾಗಿ ಜನ ನಮಗೆಲ್ಲಿ ಚಿಕ್ಕಿ ಎಂದು ಸಿಟ್ಟಿಗೆದ್ದರು.

ಲಾರಿ ಹತ್ತಿ ಚಿಕ್ಕಿಗೆ ಮುತ್ತಿಗೆ
ಚಿಕ್ಕಿ ವಿತರಣೆ ತಡವಾಗಿದ್ದು ಮತ್ತು ಕೆಲವರಿಗೆ ಸಿಗದೆ ಇದ್ದುದರಿಂದ ಆಕ್ರೋಶಿತರಾದ ಕೆಲವರು ಚಿಕ್ಕಿ ತುಂಬಿದ್ದ ಲಾರಿಯ ಕಡೆಗೆ ಧಾವಿಸಿದರು. ಲಾರಿ ಹತ್ತಿ ಚಿಕ್ಕಿಯ ಬಾಕ್ಸ್‌ಗಳನ್ನು ಎತಿಕೊಂಡರು. ಲಾರಿ ಮೇಲಿಂದ ಬಾಕ್ಸ್ ಗಳನ್ನು ಕೆಳಗೆ ಎಸೆದರು. ಸಿಕ್ಕ ಸಿಕ್ಕದವರು ಕೈಗೆ ಸಿಕ್ಕಷ್ಟು ಬಾಚಿಕೊಂಡರು. ಜನರ ಚಿಕ್ಕಿ ಮುತ್ತಿಗೆಯನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು.

ಚಿಕ್ಕಿ ಸಿಗದ ಅಜ್ಜಿ ಆಕ್ರೋಶ
ಈ ನಡುವೆ, ಯುವಕರೆಲ್ಲ ಲಾರಿ ಹತ್ತಿ ಚಿಕ್ಕಿ ಪ್ಯಾಕೆಟ್‌ ಎತ್ತಿಕೊಂಡು ಹೋಗುವುದನ್ನು ನೋಡಿದ ಅಜ್ಜಿಯೊಬ್ಬರು ʻʻನನಗೆ ಚಿಕ್ಕಿ ಸಿಕ್ಕಿಲ್ಲʼʼ ಎಂದು ಆಕ್ರೋಶ ಹೊರಹಾಕಿದರು. ಕನಕಪುರದಿಂದ ಕಾರ್ಯಕ್ರಮಕ್ಕೆ ಬಂದಿದ್ದ ಅವರು, ಯಾಕಪ್ಪ ಹೀಗೆ ಮಾಡಿದರು. ಎಲ್ಲರಿಗೂ ಕರೆಸಿ ಕೊಡಬೇಕಿತ್ತು. ಇಲ್ಲಿ ನೋಡಿದ್ರೆ ಗಲಾಟೆ ಅಗುತ್ತಿದೆ. ವಯಸ್ಸು ಆಗಿರುವ ನಮ್ಮಂತವರಿಗೆ ಏನಾದರೂ ಆದ್ರೆ ಏನು ಮಾಡೋದುʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಕಾರ್ಯಕರ್ತನೊಬ್ಬ ʻʻಈ ರೀತಿ ಮಾತಾಡಬೇಡಿ ನೀವುʼ ಎಂದು ಅಜ್ಜಿ ಮೇಲೆ ಗರಂ ಆದ. ಜತೆಗೆ ಮಾಧ್ಯಮಗಳ ಮೇಲೂ ಕೂಗಾಡಿದ.

ಇದನ್ನೂ ಓದಿ | Modi in Bengaluru| ಮೋದಿ ಭೇಟಿ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಬ್ರೇಕ್‌: ಉದ್ಯೋಗಕ್ಕೆ ತೆರಳಲು ಜನರ ಪರದಾಟ

Exit mobile version