Site icon Vistara News

ಬೆಂಗಳೂರಿಗೆ‌ ಬರ್ತಾರೆ ಮೋದಿ, ರಾಷ್ಟ್ರಪತಿ, ರಾಜಧಾನಿಯ ಎಲ್ಲ ಕಡೆ ಪೊಲೀಸ್ ಕಣ್ಗಾವಲು

PM Narendra Modi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಕಣ್ಗಾವಲಿರಿಸಲಾಗಿದೆ. ಪ್ರಧಾನಿ ಆಗಮನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿದೆ.

ಪ್ರಧಾನಿ ಮೋದಿ ಆಗಮನಕ್ಕೂ ಮುಂಚಿತವಾಗಿಯೇ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಜೂನ್‌ 13 ಹಾಗೂ 14 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಜೂನ್‌ 13ರಂದು ಬೆಳಿಗ್ಗೆ ಆಗಮಿಸಿ ನಂತರ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಜೂನ್‌ 14ರಂದು ಬೆಳಗ್ಗೆ ಬೆಂಗಳೂರಿನ ಕನಕಪುರ ರಸ್ತೆ ಸಮೀಪವಿರುವ ದೊಡ್ಡಕಲ್ಲಸಂದ್ರದ ವೈಕುಂಠ ಬೆಟ್ಟದ ತಿರುಪತಿ ದೇವಾಲಯವನ್ನು ಹೋಲುವ ಇಸ್ಕಾನ್‌ ದೇಗುಲವನ್ನು ಉದ್ಘಾಟನೆ ಮಾಡಲಿದ್ದಾರೆ. ಸಂಜೆ ವೇಳೆಗೆ ಮತ್ತೆ ದೆಹಲಿಗೆ ವಾಪಾಸ್‌ ಆಗಲಿದ್ದಾರೆ. ಜೂನ್‌ 20ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಜೂನ್‌ 21 ರಂದು ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

ಇದನ್ನು ಓದಿ| ಉಪನಗರ ರೈಲು ಯೋಜನೆಗೆ ಪ್ರಧಾನಿ ಮೋದಿ ಶಿಲಾನ್ಯಾಸ

ಆಂತರಿಕ ಭದ್ರತಾ ವಿಭಾಗ ಮತ್ತು ಗುಪ್ತಚರ ದಳ ನಗರದಾದ್ಯಂತ ಹದ್ದಿನ ಕಣ್ಣಿರಿಸಿದ್ದು, ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಬೇರೆ ರಾಜ್ಯಗಳಿಂದ ನಗರಕ್ಕೆ ಬರುತ್ತಿರುವವರ ಮೇಲೆ ಹೆಚ್ಚಿನ  ನಿಗಾ ವಹಿಸಲಾಗಿದೆ. ಇದಕ್ಕಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಹೈ ಅಲರ್ಟ್‌ ಮಾಡಲಾಗಿದೆ.

ಇತ್ತೀಚೆಗಷ್ಟೇ ಬೆಂಗಳೂರಿನ ಶ್ರೀರಾಮಪುರದಲ್ಲಿ ಕಾಶ್ಮೀರ ಮೂಲದ ಒಬ್ಬ ಉಗ್ರನನ್ನು ಪೊಲೀಸರು ಬಂಧಿಸಿದ್ದರು. ಹೀಗಾಗಿ ಪ್ರಧಾನಿ ಆಗಮನದ ವೇಳೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿಂದೆ ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತೆ ವೈಫಲ್ಯ ಉಂಟಾಗಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಅಂಥ ಪರಿಸ್ಥಿತಿ ಇಲ್ಲಿ ಉದ್ಭವವಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮಗಳನ್ನು ವಹಿಸಲಾಗಿದೆ.

ಇದನ್ನು ಓದಿ| ಸಾಲಕ್ಕೀಗ ಸುಲಭ ವೇದಿಕೆ: ಜನ ಸಮರ್ಥ್‌ ಪೋರ್ಟಲ್‌ ತೆರೆದಿಟ್ಟ ಪ್ರಧಾನಿ ಮೋದಿ

ಸದ್ಯಕ್ಕೆ ನಗರಾದ್ಯಂತ ಪೊಲೀಸರು ಗರಿಷ್ಠ ಭದ್ರತೆ ಮಾಡಲಾಗಿದ್ದು, ಪೊಲೀಸರು ಮಫ್ತಿಯಲ್ಲೂ ಸಿಟಿ ರೌಂಡ್ಸ್‌ ಹಾಕುತ್ತಿದ್ದಾರೆ. ಇದರ ಜೊತೆಗೆ ತಿಂಗಳ ಹಿಂದೆ ಹೊರ ದೇಶದಿಂದ ಬಂದಿರುವ ಪ್ರಯಾಣಿಕರ ಚಲನವಲನದ ಮೇಲೂ ಹೆಚ್ಚಿನ ನಿಗಾ ವಹಿಸಿದ್ದಾರೆ. ಜೈಲಿನಲ್ಲಿ ಇರುವವರ ಮೇಲೂ ಹಾಗೂ ಜೈಲು ಕರೆಗಳ ಮೇಲೂ ಪೊಲೀಸರು ನಿಗಾ ವಹಿಸಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಆಗಮನದ ವೇಳೆ ಯಾವುದೇ ಸಮಸ್ಯೆಯಾಗದಂತೆ ನಗರದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

Exit mobile version