ಬಳ್ಳಾರಿ: ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ (Independence day) ಮತ್ತು 24ನೇ ಕಾರ್ಗಿಲ್ ವಿಜಯ ದಿವಸ (Kargil Vijay Diwas) ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಜೀವ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ ಅಂಗವಾಗಿ “ಸಲಾಮ್ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ದೇಶ ಸೇವೆಗೆ ಸೇನೆ ಸೇರುವಂತೆ ಜಾಗೃತಿಗಾಗಿ 5 ಗಂಟೆ ನಿರಂತರ ಮ್ಯಾರಥಾನ್ ಓಟ ಓಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಮೋಹನ್ ಕುಮಾರ್ ದಾನಪ್ಪ ಅವರು ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ (Bravo International Book of World Record) ನಲ್ಲಿ ದಾಖಲೆ ಮಾಡಿದ್ದಾರೆ.
ಆಗಸ್ಟ್ 15 ರಂದು ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ತಡೆರಹಿತವಾಗಿ ನಿರಂತರ 5 ಗಂಟೆಗಳ ಕಾಲಾವಧಿಯಲ್ಲಿ ಸಮುದ್ರ ಮಟ್ಟಕ್ಕಿಂತ 10.800 ಅಡಿ ಎತ್ತರದಲ್ಲಿರುವ ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ 42 ಕಿಲೋ ಮೀಟರ್ ಓಡುವ ಮೂಲಕ ವಿನೂತನ ಮ್ಯಾರಥಾನ್ ಓಟ ನಡೆಸಿರುವ ಪ್ರಥಮ ವ್ಯಕ್ತಿಯೆಂದು ಪರಿಗಣಿಸಿದ ಬ್ರಾವೊ ಇಂಟರ್ ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಸಂಪಾದಕೀಯ ಮಂಡಳಿಯು ಸೆಪ್ಟೆಂಬರ್ 20, 2023 ರಂದು ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸಿ ಆಯ್ಕೆ ಮಾಡಿ ಅನುಮೋದಿಸಿ, ಬ್ರಾವೊ ಅಂತರಾಷ್ಟೀಯ ವಿಶ್ವ ದಾಖಲೆ ಪುಸ್ತಕ (ಬ್ರಾವೊ ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್) ಕ್ಕೆ ಮೋಹನ್ ಕುಮಾರ್ ದಾನಪ್ಪ ಅವರನ್ನು ದಾಖಲೆಗಾರನೆಂದು ಸೇರ್ಪಡಿಸಲಾಗಿದೆ.
ಇದನ್ನೂ ಓದಿ: Weather Report : 20 ಜಿಲ್ಲೆಗಳಲ್ಲಿ ಮಳೆರಾಯನಿಗೆ ಬಿಡುವೇ ಇಲ್ಲ!
ಮೋಹನ್ ಕುಮಾರ್ ದಾನಪ್ಪ ಅವರು ಸದರಿ ಓಟದಲ್ಲಿ ತೋರಿದ ತಾಳ್ಮೆ,ಧೈರ್ಯ ಹಾಗೂ ಪ್ರಯತ್ನ, ಇವರ ಕೌಶಲ್ಯವನ್ನ ಪ್ರಶಂಸಿಸಿ ಅಂಗೀಕರಿಸಲಾಗಿದೆ, ಶೀಘ್ರದಲ್ಲೇ ಅಧಿಕೃತ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನು ಮೋಹನ್ ಕುಮಾರ್ ಅವರಿಗೆ ಕಳುಹಿಸಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.