ಧಾರವಾಡ: ಇಲ್ಲಿನ ಗರಗ ಗ್ರಾಮದ ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಎದುರು ಬಾಲಕಿ ಮೇಲೆ ಕೋತಿಯೊಂದು ದಾಳಿ (Monkey Attack) ಮಾಡಿದೆ. 2ನೇ ತರಗತಿಯಲ್ಲಿ ಓದುತ್ತಿರುವ ಇಕರಾ ಗಡಕಾರಿ ಎಂಬ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ.
ಇಕರಾ ಗಡಕಾರಿ ಕೋತಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಈ ವೇಳೆ ಅಟ್ಟಾಡಿಸಿಕೊಂಡು ಹೋದ ಕೋತಿ ಕಾಲಿಗೆ ಕಚ್ಚಿದೆ. ಮಗುವಿನ ಎಡಗಾಲು ಹಿಡಿದು ಎಳೆದಾಡಿದೆ. ಬಾಲಕಿಯ ಎಡಗಾಲಿಗೆ ಗಂಭೀರ ಗಾಯವಾಗಿದ್ದು, ದಾಳಿ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿ ಕಿರುಚಾಡುತ್ತಿದ್ದಂತೆ ಕೆಲ ಸ್ಥಳೀಯರು ಓಡಿ ಬಂದಾಗ ಕೋತಿ ಅಲ್ಲಿಂದ ಕಾಲ್ಕತ್ತಿದೆ.
ಗಾಯಾಳು ಬಾಲಕಿಯನ್ನು ಪ್ರಾಥಮಿಕ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗಿದ್ದು, ತೀವ್ರ ಗಾಯಗೊಂಡ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೋತಿ ಹಾವಳಿ ಹೆಚ್ಚಾಗಿದೆ. ದಾಳಿ ಮಾಡಿದ ಕೋತಿಯನ್ನು ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕೋತಿ ದಾಳಿ ಸುದ್ದಿ ಕೇಳಿ ಶಾಲೆಗೆ ಬರಲು ಮಕ್ಕಳು ಭೀತಿಗೊಂಡಿದ್ದಾರೆ.
ಇದನ್ನೂ ಓದಿ: Video Viral: ಫ್ರೀ ಬಸ್‌ಗಾಗಿ ದಾರಿ ಕಾದು ನಿಂತ ಆನೆ; ಸೀಟು ಬಿಟ್ಟುಕೊಡದೇ ಕಿರುಚಿದ ಮಹಿಳೆಯರು!
ಹುಲಿ ದಾಳಿಗೆ ಹಸು ಬಲಿ
ಕೊಡಗಿನಲ್ಲಿ ಪೊನ್ನಂಪೇಟೆ ತಾಲೂಕಿನ ಬೆಸಗೂರಿನಲ್ಲಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿದೆ. ಗ್ರಾಮದ ಬಿ. ಸಂಪತ್ ಎಂಬುವವರು ಹಸು ಮೇಯಲು ಬಿಟ್ಟಿದ್ದರು. ಈ ವೇಳೆ ಹಸುವಿನ ಮೇಲೆ ಎರಗಿ ದಾಳಿ ಮಾಡಿದೆ. ಹಸು ಕಳೆದುಕೊಂಡು ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇಂದು ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ನಾಳೆ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ.
ಬಾಲಕಿ ಮೇಲೆ ಎರಗಿದ ಚಿರತೆ
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಗ್ಗಲಿಗುಂದಿ ಸೋಲಿಗರ ಹಾಡಿಯಲ್ಲಿ ಆರುವರೆ ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿದೆ. ಸುಶೀಲ ಎಂಬ ಬಾಲಕಿ ಗಾಯಗೊಂಡವಳು. ಸುಶೀಲ ಮನೆಯಿಂದ ಹೊರಬಂದಾಗ ಚಿರತೆ ದಾಳಿ ಮಾಡಿದೆ. ಬಾಲಕಿಯನ್ನು ಎಳೆದೊಯ್ಯಲು ಯತ್ನಿಸಿದ್ದು, ಬಾಲಕಿ ಕಿರುಚಾಟ ಕೇಳಿ ಮನೆಯವರು ಹೊರಗೆ ಬಂದಿದ್ದಾರೆ. ಈ ವೇಳೆ ಮನೆಯವರು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಬಾಲಕಿಯನ್ನು ಬಿಟ್ಟು ಚಿರತೆ ಓಡಿದೆ. ಕೂಡಲೇ ಗಾಯಗೊಂಡ ಬಾಲಕಿಯನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ