ಕೋಲಾರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಮಾಂಡೌಸ್ ಚಂಡಮಾರುತದಿಂದಾಗಿ (Monsoon News) ರಾಜ್ಯದಲ್ಲಿ ಮಳೆ ಹಾಗೂ ಶೀತ ಗಾಳಿ ಹೆಚ್ಚಿದೆ. ಕಳೆದೆರಡು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶನಿವಾರದಂದು ಅತಿಯಾದ ಮಳೆಯೊಂದಿಗೆ ಚಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಸಂಬಂಧ ಕೆಜಿಎಫ್‌ನ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದು, ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಶನಿವಾರ ರಜೆಯನ್ನು ಘೋಷಿಸಲಾಗಿದೆ. ಮಳೆ ಹಾಗೂ ಚಳಿ ಇದ್ದು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಸ್‌ಡಿಎಂಸಿ/ಆಡಳಿತ ಮಂಡಳಿ ಅನುಮೋದನೆ ಪಡೆದು ಶಾಲೆಗಳಿಗೆ ರಜೆ ನೀಡಲು ಅನುಮತಿಸಲಾಗಿದೆ.
ಇತ್ತ ಈ ದಿನದ ಶಾಲಾ ಅವಧಿಯನ್ನು ಮುಂದಿನ ಶನಿವಾರ ಪೂರ್ಣ ದಿನ ಶಾಲೆ ನಡೆಸುವುದರ ಮೂಲಕ ಸರಿದೂಗಿಸಲು ಆದೇಶಿಸಲಾಗಿದೆ. ಈ ಸಂಬಂಧ ಕೋಲಾರ ಜಿಲ್ಲಾ ಡಿಡಿಪಿಐ ಕೃಷ್ಣಮೂರ್ತಿ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದು, ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರಿಗೆ ರಜೆ ಅಧಿಕಾರ ನೀಡಲಾಗಿದ್ದು, ಮಕ್ಕಳಿಗೆ ತೊಂದರೆ ಆಗದಂತೆ ರಜೆ ನೀಡಲು ಸಮ್ಮತಿಸಲಾಗಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಪ್ರಯಾಣ ಸಮಸ್ಯೆ ಹಾಗೂ ಶಾಲಾ ಕಟ್ಟಡಗಳು ಶಿಥಿಲವಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ | Cyclone mandous | ಬೆಂಗಳೂರಿನಲ್ಲಿ ತುಂತುರು ಮಳೆ, ಇನ್ನೂ ಮೂರು ದಿನ ರಾಜಧಾನಿ ಕೂಲ್